ಅರಣ್ಯ ಇಲಾಖೆಯಲ್ಲಿ ಶೀಘ್ರವೇ 6 ಸಾವಿರ ಹುದ್ದೆಗಳ ನೇಮಕಾತಿ: ಸಚಿವ ಈಶ್ವರ್ ಖಂಡ್ರೆ

ಕಲಬುರಗಿ: ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 6000 ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲಾಖೆಯಲ್ಲಿ ಈಗಾಗಲೇ 341 ಹುದ್ದೆಗಳ ಭರ್ತಿ ಮಾಡಲಾಗಿದೆ. 540 ಹುದ್ದೆಗಳ ನೇಮಕಾತಿಯ ಪ್ರಕ್ರಿಯೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿ ಆದಷ್ಟು ಬೇಗ ಎಲ್ಲ ರೀತಿಯ ಹುದ್ದೆಗಳನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ನಿರ್ಲಕ್ಷ್ಯ ಮಾಡಿದ್ದರಿಂದಲೇ ಅಧಿಕಾರಿಗಳ ಅಮಾನತು:
ಚಾಮರಾಜನಗರದಲ್ಲಿ ಹುಲಿಗಳು ಸಾವನ್ನಪ್ಪಿರುವ ಪ್ರಕರಣದಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ಮಾಡಿದ್ದರಿಂದಲೇ ಅವರನ್ನು ಅಮಾನತು ಮಾಡುವಂತೆ ಸೂಚನೆ ಕೊಡಲಾಗಿದೆ. ಇನ್ನೋರ್ವ ಅಧಿಕಾರಿ ಭಾರತೀಯ ಅರಣ್ಯ ಇಲಾಖೆಯ ಸೇವೆಯ ವ್ಯಾಪ್ತಿಯಲ್ಲಿದ್ದರಿಂದ ಅವರ ಅಮಾನತ್ತಿಗೆ ಸಿಎಂ ಅವರಿಗೆ ಶಿಫಾರಸು ಮಾಡಿದ್ದೇನೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಆಳಂದ ಶಾಸಕ ಬಿ.ಆರ್.ಪಾಟೀಲ್ ಮತ್ತಿತರರು ಇದ್ದರು.