ಡಿಸಿ ಕಚೇರಿಯ ಪ್ರವೇಶದ್ವಾರದ ನವೀಕರಣ ಪ್ರಾರಂಭ : ವರದಿಯಿಂದ ಎಚ್ಚೆತ್ತ ಕಲಬುರಗಿ ಜಿಲ್ಲಾಡಳಿತ
ವಾರ್ತಾಭಾರತಿ ಫಲಶ್ರುತಿ

ಕಲಬುರಗಿ : ಜಿಲ್ಲಾಡಳಿತ ಕಚೇರಿಯ ಮುಂಭಾಗದಲ್ಲಿರುವ ಪ್ರವೇಶದ್ವಾರವು ಕುಸಿಯುವ ಹಂತದಲ್ಲಿತ್ತು. ವಾರ್ತಾ ಭಾರತಿಯ ವಿಶೇಷ ವರದಿಯಿಂದ ಎಚ್ಚೆತ್ತ ಕಲಬುರಗಿ ಜಿಲ್ಲಾಡಳಿತ ಇದೀಗ ಅದರ ನವೀಕರಣಕ್ಕೆ ಮುಂದಾಗಿದೆ.
ಜ.9ರಂದು ‘ಮೃತ್ಯುಕೂಪಕ್ಕೆ ಆಹ್ವಾನಿಸುತ್ತಿರುವ ಡಿಸಿ ಕಚೇರಿ ಪ್ರವೇಶದ್ವಾರ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಆ ವರದಿಯ ಪರಿಣಾಮ ಇಂದು ಶಿಥಿಲಾವಸ್ಥೆಯಲ್ಲಿರುವ ಕಮಾನ್‌ಗೆ ಮರುಜೀವ ಸಿಗುತ್ತಿದೆ.
ನಗರದ ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಿಂದ ಸೂಪರ್ ಮಾರ್ಕೆಟ್‌ಗೆ ಹೋಗುವ ಮುಖ್ಯ ರಸ್ತೆಯಲ್ಲಿರುವ ‘ಮಿನಿ ವಿಧಾನಸೌಧ’ ಎಂದು ಕರೆಯಲ್ಪಡುವ ಜಿಲ್ಲಾಡಳಿತ ಕಚೇರಿಗೆ ಕೆಲಸದ ನಿಮಿತ್ತ ದಿನನಿತ್ಯ ಸಾವಿರಾರು ಜನರು ಬರುತ್ತಾರೆ. ಅಲ್ಲದೆ ಇಲ್ಲಿ ಪ್ರತಿದಿನ ಒಂದಿಲ್ಲೊಂದು ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಈ ಪ್ರದೇಶವು ಯಾವಾಗಲೂ ಜನಜಂಗುಳಿಯಿಂದ ತುಂಬಿರುತ್ತದೆ. ಕಚೇರಿಯ ಒಳಗಡೆ, ಹೊರಗಡೆಯೂ ಜನರಿಂದ ಆವರಿಸಿರುತ್ತದೆ. ಈ ಕಮಾನುಗಳ ಪಕ್ಕದಲ್ಲೇ ನಗರ ಬಸ್ ನಿಲ್ದಾಣವೂ ಇರೋದರಿಂದ ಬಸ್, ಆಟೊ ಮತ್ತಿತರ ವಾಹನಗಳು ಸೇರಿದಂತೆ ಪ್ರಯಾಣಿಕರು ಸಹ ಇಲ್ಲೇ ಹೆಚ್ಚಾಗಿ ಕಾಣಿಸುತ್ತಾರೆ. ಇಂತಹ ಜನಭರಿತ ಪ್ರದೇಶವಾದ ಡಿಸಿ ಕಚೇರಿಯ ಪ್ರವೇಶ ದ್ವಾರಗಳ ಮೇಲ್ಭಾಗದ ಕಮಾನುಗಳು ಕುಸಿಯುವ ಹಂತದಲ್ಲಿದ್ದವು. ಇದನ್ನ ನವೀಕರಣಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದರು.
ಒಂದಿಲ್ಲ ಒಂದು ದಿನ ಕಮಾನುಗಳು ಕುಸಿದು ಯಾರನ್ನಾದರೂ ಗಾಯಗೊಳಿಸುವುದರಲ್ಲಿ, ಸಾವನ್ನಪ್ಪಲು ಕಾರಣವಾಗುತ್ತಿದ್ದವು. ಬೀಳುವ ಹಂತದಲ್ಲಿದ್ದ ಐತಿಹಾಸಿಕ ಕಟ್ಟಡವನ್ನು ನವೀಕರಣ ಮಾಡುತ್ತಿರುವುದು ಸಂತಸವಾಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.
ಶತಮಾನೋತ್ಸವ ಕಟ್ಟಡಕ್ಕೆ ಮರುಜೀವ: ಜಿಲ್ಲಾಡಳಿತ ಕಚೇರಿಯ ಪ್ರವೇಶ ದ್ವಾರಗಳು ನಿಜಾಮರ ಕಾಲದಲ್ಲಿ ಕಟ್ಟಿರುವ ಕಟ್ಟಡವಾಗಿದ್ದು, ಇದು ಸುಮಾರು 150 ವರ್ಷಕ್ಕೂ ಹಳೆಯ ಕಟ್ಟಡವಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಬೀಳುವ ಹಂತದಲ್ಲಿದ್ದ ಕಮಾನುಗಳ ಅವ್ಯವಸ್ಥೆಯನ್ನು ಕೇಳುವವರು ಯಾರು ಇರಲಿಲ್ಲ. ಇದಕ್ಕೆ ವಾರ್ತಾಭಾರತಿ ಧ್ವನಿಯಾಗಿ ಲೇಖನ ಪ್ರಕಟಿಸಿತ್ತು. ಪ್ರಕಟ ಬೆನ್ನಲ್ಲೇ ವಿಶೇಷ ಲೇಖನವನ್ನು ಮುಖ್ಯಮಂತ್ರಿ ಕಚೇರಿಯ ಕುಂದುಕೊರತೆಯ ವಿಶೇಷ ಕರ್ತವ್ಯಾಧಿಕಾರಿಗಳು ಸ್ಪಂದಿಸಿದ್ದಾರೆ. ಇದರ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.
ಸೂಚನೆಯಂತೆಯೇ ಕಲಬುರಗಿ ಲೋಕೋಪಯೋಗಿ ಇಲಾಖೆಯ ಅಭಿಯಂತರರು, ಕಟ್ಟಡದ ಬಿರುಕಿನ ದುರಸ್ತಿಗೆ ಜ.27ರಿಂದ ಕಾರ್ಯ ಕೈಗೊಳ್ಳಲಾಗುವುದು ಎಂದು ಉತ್ತರಿಸಿದ್ದರು. ಇದರ ಬೆನ್ನಲ್ಲೇ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಶತಮಾನೋತ್ಸವದ ಕಟ್ಟಡಕ್ಕೆ ಮತ್ತೆ ಮರುಜೀವ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.







