ಅಫಜಲಪುರದಲ್ಲಿ ಅಂಬೇಡ್ಕರ್ ಭವನ, ಚೌಡಾಪುರದಲ್ಲಿ ಬುದ್ಧ ವಿಹಾರ ನಿರ್ಮಾಣಕ್ಕೆ ಮನವಿ

ಅಫಜಲಪುರ: ಅಫಜಲಪುರ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ಹಾಗೂ ಚೌಡಾಪುರ ಗ್ರಾಮದ ಹೊರವಲಯದ ಜಮೀನಿನಲ್ಲಿ ಬುದ್ಧ ವಿಹಾರ ನಿರ್ಮಿಸಬೇಕು ಎಂದು ಆಗ್ರಹಿಸಿ, ಬಲಗೈ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಭಗವಂತ ವಗ್ಗೆ ಹಾಗೂ ಗೌರವಾಧ್ಯಕ್ಷ ನಾಗೇಶ ಹೊಸಮನಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನರೇಂದ್ರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬಲಗೈ ಸಮುದಾಯಗಳ ಜಿಲ್ಲಾ ಹಾಗೂ ತಾಲೂಕು ಒಕ್ಕೂಟದ ಪದಾಧಿಕಾರಿಗಳೊಂದಿಗೆ ಬೆಂಗಳೂರಿಗೆ ತೆರಳಿದ ನಿಯೋಗವು ನಿಗಮದ ಅಧ್ಯಕ್ಷ ಸಿ. ನರೇಂದ್ರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಅಫಜಲಪುರ ತಾಲೂಕಿನಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸುವ ಅಗತ್ಯವಿದೆ. ಅದೇ ರೀತಿ ಚೌಡಾಪುರ ಗ್ರಾಮದ ಸರ್ವೇ ನಂಬರ್ 75ರ ಜಮೀನಿನಲ್ಲಿ ಬುದ್ಧ ವಿಹಾರ ಹಾಗೂ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಒತ್ತಾಯಿಸಿತು.
ತಾಲೂಕಿನ ಹಲವು ಗ್ರಾಮಗಳಲ್ಲಿರುವ ಅಂಬೇಡ್ಕರ್ ಸಮುದಾಯ ಭವನಗಳು ಶಿಥಿಲಾವಸ್ಥೆಗೆ ತಲುಪಿದ್ದು, ಸಮುದಾಯದ ಜನರು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಹಳೆಯ ಕಟ್ಟಡಗಳ ದುರಸ್ತಿ ಹಾಗೂ ಹೊಸ ಭವನಗಳ ನಿರ್ಮಾಣಕ್ಕೆ ನಿಗಮ ಆದ್ಯತೆ ನೀಡಬೇಕು ಎಂದು ಮನವಿ ಮಾಡಲಾಯಿತು.
ನಿಯೋಗದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನಿಗಮದ ಅಧ್ಯಕ್ಷ ಸಿ. ನರೇಂದ್ರ ಅವರು, ಕಲಬುರಗಿ ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ ಎಂದು ಪದಾಧಿಕಾರಿಗಳು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಹಾದೇವ ಮೋಘಾ, ಚಂದ್ರಕಾಂತ ವಾಲಿ, ಪ್ರಭು ಪಟ್ಟಣಕರ್, ಹಿರಿಯ ಸಲಹೆಗಾರ ಡಾ. ಶಾಂತಮಲ್ಲಪ್ಪ ಹೊನ್ನುಂಗರ, ಉಪಾಧ್ಯಕ್ಷ ಸುರೇಶ ಸಿಂಗೆ, ಪ್ರಧಾನ ಕಾರ್ಯದರ್ಶಿ ಬೈಲಪ್ಪ ಪಟ್ಟೆದಾರ, ಜಂಟಿ ಕಾರ್ಯದರ್ಶಿ ಚಂದ್ರಕಾಂತ ಬನಸೋಡೆ, ಅಣ್ಣಾರಾಯ ಸಿಂಗೆ, ನಿಂಗಪ್ಪ ದಿಮ್ಮೆ ಹಾಗೂ ಸಹ ಕಾರ್ಯದರ್ಶಿ ಶಾಮರಾವ್ ದೊಡ್ಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.






