ಕಲಬುರಗಿಯಲ್ಲಿ ಸ್ಟಾರ್ಟ್‌ಅಪ್‌ಗಳ ಉತ್ತೇಜನಕ್ಕೆ 12.5 ಕೋಟಿ ರೂ. ಅನುದಾನ: ಜಿಲ್ಲಾಧಿಕಾರಿ ಇಕ್ರಮ್ ಶರೀಫ್
ನ.14ರಂದು ಕಲ್ಯಾಣ ಕರ್ನಾಟಕ ಸ್ಟಾರ್ಟ್‌ಅಪ್ ಸಂವಾದ-2026

ಕಲಬುರಗಿ : ಬೆಂಗಳೂರಿನಾಚೆಗೂ ಐಟಿ-ಬಿಟಿ ಹಾಗೂ ನವೋದ್ಯಮ ವಲಯವನ್ನು ವಿಸ್ತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಲೀಪ್’ (LEAP) ಯೋಜನೆಯಡಿ ಕಲಬುರಗಿಯನ್ನು ಪ್ರಾದೇಶಿಕ ಸ್ಟಾರ್ಟ್‌ಅಪ್‌ಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ ಕೃಷಿ ಮತ್ತು ಗ್ರಾಮೀಣ ನಾವೀನ್ಯತೆ ಆಧಾರಿತ ನವೋದ್ಯಮಗಳ ಉತ್ತೇಜನಕ್ಕಾಗಿ ಕೃಷಿಕಲ್ಪ ಫೌಂಡೇಶನ್ ಮೂಲಕ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲಾಗಿದ್ದು, ಇದಕ್ಕೆ ಸುಮಾರು 12ರಿಂದ 12.5 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್ ತಿಳಿಸಿದರು.
ಗುರುವಾರ ನಗರದ ಗಾಜಿಪುರ ಚಕ್ಕರ ಕಟ್ಟಾ, ಸಿಟಿ ಸೆಂಟರ್ ಮಾಲ್ ಸಮೀಪದ ಕೃಷಿಕಲ್ಪ ಫೌಂಡೇಶನ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವೋದ್ಯಮಗಳಿಗೆ ಸೂಕ್ತ ಮಾರ್ಗದರ್ಶನ (ಮೆಂಟರ್‌ಶಿಪ್), ನೆಟ್‌ವರ್ಕಿಂಗ್ ಹಾಗೂ ಬಂಡವಾಳ ಸಂಗ್ರಹಣೆಗೆ ಅಗತ್ಯ ನೆರವು ಒದಗಿಸಲಾಗುವುದು. ಹೈಕೋರ್ಟ್ ಸಮೀಪ ಅತ್ಯಾಧುನಿಕ ಸಹಕಾರ ಕಾರ್ಯಸ್ಥಳ (ಕೋ-ವರ್ಕಿಂಗ್ ಸ್ಪೇಸ್) ಒಳಗೊಂಡ ‘ಲೀಪ್ ಲ್ಯಾಬ್ಸ್’ ಹಾಗೂ ನಗರದ ಸಮೀಪ ಸುಸಜ್ಜಿತ ಐಟಿ ಪಾರ್ಕ್ ನಿರ್ಮಿಸುವ ಉದ್ದೇಶವೂ ಸರ್ಕಾರಕ್ಕಿದೆ ಎಂದರು.
ಕೃಷಿಕಲ್ಪ ಫೌಂಡೇಶನ್ ಸಿಇಒ ಸಿ.ಎಂ. ಪಾಟೀಲ ಮಾತನಾಡಿ, ನವೆಂಬರ್ 14ರಂದು ನಗರದ ಹೃದಯಭಾಗದಲ್ಲಿರುವ ನೂತನ ಇನ್‌ಕ್ಯುಬೇಷನ್ ಕೇಂದ್ರದ ಕಚೇರಿ ಉದ್ಘಾಟಿಸಲಾಗುವುದು. ಇದರ ಅಂಗವಾಗಿ ‘ಬೆಂಗಳೂರಿನಾಚೆಗೆ ಉದ್ಯಮಶೀಲತೆಯ ಹೊಸ ಸಾಧ್ಯತೆಗಳು, ಕಲ್ಯಾಣ ಕರ್ನಾಟಕದ ಉದ್ಯಮಶೀಲ ಸಾಮರ್ಥ್ಯದ ಅನಾವರಣ’ ವಿಷಯದಡಿ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕ ಸ್ಟಾರ್ಟ್‌ಅಪ್ ಸಂವಾದ-2026 ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಾದ ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರದ 300ಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟ್‌ಅಪ್‌ಗಳು, ಉದ್ಯಮಿಗಳು, ಏಂಜಲ್ ಹೂಡಿಕೆದಾರರು, ವೆಂಚರ್ ಕ್ಯಾಪಿಟಲಿಸ್ಟ್‌ಗಳು, ಕೈಗಾರಿಕಾ ವಲಯದ ನಾಯಕರು ಹಾಗೂ ನೀತಿ ನಿರೂಪಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸ್ಥಳೀಯ ಆಡಳಿತದ ಸಹಯೋಗದಲ್ಲಿ ಸರ್ಕಾರಿ ಇಲಾಖೆಗಳ ನೈಜ ಸಮಸ್ಯೆಗಳಿಗೆ ವಿದ್ಯಾರ್ಥಿಗಳಿಂದ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳುವ ‘ಸಾಲ್ವಥಾನ್’ ವಿಶೇಷ ಉಪಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ತಮ್ಮ ಕೌಶಲ ಮತ್ತು ನಾವೀನ್ಯತೆಯನ್ನು ಬಳಸಿಕೊಂಡು ಸಮಸ್ಯೆಗಳಿಗೆ ಪರಿಹಾರ ರೂಪಿಸಲು ಇದರಿಂದ ಅವಕಾಶ ದೊರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಗ್‌ಬಾಸ್ಕೆಟ್‌ನ ವಿಪುಲ್ ಮಿತ್ತಲ್, ದೇಹಾತ್‌ನ ಆದರ್ಶ್ ಶ್ರೀವಾಸ್ತವ, ಬಿಗ್‌ಹಾಟ್‌ನ ಸಚಿನ್ ನಂದವಾನಾ, ಸಿ-ಕ್ಯಾಂಪ್ ನಿರ್ದೇಶಕ ಡಾ. ತಸ್ಲೀಮ್ ಹಾಗೂ ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ಸೇರಿದಂತೆ ದೇಶದ ಪ್ರಮುಖ ಉದ್ಯಮ ನಾಯಕರು ಪಾಲ್ಗೊಳ್ಳಲಿದ್ದಾರೆ.
ಯುವಜನರು ಉದ್ಯೋಗ ಅರಸಿ ಮಹಾನಗರಗಳಿಗೆ ವಲಸೆ ಹೋಗುವುದನ್ನು ತಡೆದು, ಕಲ್ಯಾಣ ಕರ್ನಾಟಕದಲ್ಲಿಯೇ ಉದ್ಯಮಗಳನ್ನು ಸ್ಥಾಪಿಸಿ ಯಶಸ್ವಿಯಾಗಲು ಪೂರಕ ವಾತಾವರಣ ನಿರ್ಮಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.






