ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನ : ಅದೇ ಸ್ಥಳದಲ್ಲಿ ಬೃಹತ್ ಪ್ರತಿಭಟನೆಗೆ ಅವಕಾಶಕ್ಕಾಗಿ ಗೊಂಡ-ಕುರುಬ ಎಸ್ಟಿ ಹೋರಾಟ ಸಮಿತಿಯಿಂದ ಮನವಿ

ಕಲಬುರಗಿ: ಚಿತ್ತಾಪುರ ಪಟ್ಟಣದಲ್ಲಿ ಆರೆಸ್ಸೆಸ್, ಭೀಮ್ ಆರ್ಮಿ ಹಾಗೂ ದಲಿತ ಪ್ಯಾಂಥರ್ಸ್ ಸಂಘಟನೆಗಳಿಂದ ಪಥಸಂಚಲನಕ್ಕಾಗಿ ಅನುಮತಿಗೆ ಹಗ್ಗಜಗ್ಗಾಟ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಅದೇ ಸ್ಥಳದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದ್ದು, ನಮಗೂ ಹೋರಾಟಕ್ಕೆ ಅವಕಾಶ ಕೊಡಬೇಕೆಂದು ಗೊಂಡ-ಕುರುಬ ಎಸ್ಟಿ ಹೋರಾಟ ಸಮಿತಿಯು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಕುರುಬ ಸಮಾಜವನ್ನು ಎಸ್.ಟಿ.ಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಚಿತ್ತಾಪುರ ಪಟ್ಟಣದಲ್ಲಿ ಕನಕ ಭವನದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದ್ದು, 5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ಈ ಹೋರಾಟಕ್ಕೆ ಅನುಮತಿ ನೀಡಬೇಕೆಂದು ಸಮಿತಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಮಹಾಂತೇಶ ಕೌಲಗಿ, ನ.2 ರಂದು ಆರೆಸ್ಸೆಸ್ ನವರಿಗೆ ಅನುಮತಿ ಕೊಡುತ್ತಿದ್ದರೆ ನಮಗೂ ಕೊಡಿ, ನಮ್ಮದೂ ದೊಡ್ಡ ಸಂಘಟನೆ. ಅವರು ಕೇವಲ ಮೆರವಣಿಗೆ ಮಾಡುತ್ತಾರೆ ಅಷ್ಟೇ, ನಮ್ಮದು 30 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ದೊಡ್ಡ ಮಟ್ಟದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ನಮಗೂ ಅವಕಾಶ ಕೊಡಲಿ ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಲಕ್ಷ್ಮಣ್ ಪೂಜಾರಿ, ಎಸ್.ಎಸ್.ಪೂಜಾರಿ, ನಿಂಗಪ್ಪ ಹೇರೂರು, ಶರಣಪ್ಪ ಕೆಸರಟಗಿ, ಕೆ.ಪ್ರಧಾನಿ, ಸಿದ್ದಪ್ಪ ರುಸ್ತುಂಪುರ, ರೇವಣಸಿದ್ಧ ಮುಗಟಿ, ಧರ್ಮಣ್ಣ ಚೌಕಿ, ಸಿದ್ದು ಮಾಶ್ಯಾಳ, ಬಸವರಾಜ ನಾಗನಳ್ಳಿ, ವಿಠ್ಠಲ ಬರಗಾಲಿ, ಜಗದೇವಪ್ಪ ಭಾಸಗಿ, ಅಮೋಘಸಿದ್ಧ ಪೂಜಾರಿ, ಸೇರಿದಂತೆ ಮತ್ತಿತರರು ಇದ್ದರು.







