ಕಲಬುರಗಿಯಲ್ಲಿ ಇಂದು ಆರೆಸ್ಸೆಸ್ ಪಥಸಂಚಲನ; 18 ಷರತ್ತುಗಳೊಂದಿಗೆ ಅನುಮತಿ
ಪ್ರಚೋದನಕಾರಿ ಬ್ಯಾನರ್, ಅಶ್ಲೀಲ ಭಾಷೆ, ಹಾಡು-ನೃತ್ಯಕ್ಕೆ ನಿರ್ಬಂಧ; ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರ ಸೂಚನೆ

ಸಾಂದರ್ಭಿಕ ಚಿತ್ರ | Photo Credit : PTI
ಕಲಬುರಗಿ, ಅ.25: ವಿಜಯದಶಮಿ ಅಂಗವಾಗಿ ಕಲಬುರಗಿ ನಗರದಲ್ಲಿ ರವಿವಾರ ನಡೆಯಲಿರುವ ಆರೆಸ್ಸೆಸ್ ಪಥಸಂಚಲನಕ್ಕೆ ಪೊಲೀಸ್ ಇಲಾಖೆ 18 ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. ಪಥಸಂಚಲನದ ಸಂದರ್ಭದಲ್ಲಿ ಪ್ರಚೋದನಕಾರಿ ಬ್ಯಾನರ್ಗಳ ಪ್ರದರ್ಶನ, ಅಶ್ಲೀಲ ಭಾಷೆಯ ಬಳಕೆ ಹಾಗೂ ಪ್ರಚೋದನೆಗೆ ಕಾರಣವಾಗಬಹುದಾದ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಪೊಲೀಸರು ಸ್ಪಷ್ಟ ಸೂಚನೆ ನೀಡಿದ್ದಾರೆ.
ಆರೆಸ್ಸೆಸ್ ಜಿಲ್ಲಾ ಮುಖಂಡರು ಸಲ್ಲಿಸಿದ ಮನವಿಯ ಆಧಾರದಲ್ಲಿ ಕಲಬುರಗಿ ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ಆಯುಕ್ತರಾದ ಶಾಲು ಪಥಸಂಚಲನಕ್ಕೆ ಅನುಮತಿ ನೀಡಿದ್ದಾರೆ. ರವಿವಾರ ಮಧ್ಯಾಹ್ನ 3 ಗಂಟೆಗೆ ನಗರದ ಎಪಿಎಂಸಿ ಬಳಿಯಿಂದ ಪಥಸಂಚಲನ ಆರಂಭವಾಗಲಿದೆ. ಮಿಜಗುರಿ, ಡಂಕಾ ಚೌಕ್ ಹಾಗೂ ಗಣೇಶ ಮಂದಿರ ಮಾರ್ಗವಾಗಿ ಸಾಗಲಿರುವ ಪಥಸಂಚಲನ, ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ.
ಪಥಸಂಚಲನದ ವೇಳೆ ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆಯಾಗುವಂತಹ ಬ್ಯಾನರ್ಗಳು, ಫಲಕಗಳು ಅಥವಾ ಘೋಷಣೆಗಳನ್ನು ಬಳಸಬಾರದು ಎಂದು ಪೊಲೀಸ್ ಇಲಾಖೆ ಷರತ್ತು ವಿಧಿಸಿದೆ. ಅಶ್ಲೀಲ ಭಾಷೆ ಬಳಸುವುದು, ಅಶ್ಲೀಲ ಹಾಡುಗಳನ್ನು ಹಾಡುವುದು ಅಥವಾ ಪ್ರಸಾರ ಮಾಡುವುದು ಹಾಗೂ ಅಶ್ಲೀಲ ನೃತ್ಯಗಳಿಗೆ ಅವಕಾಶ ನೀಡದಂತೆ ಸೂಚಿಸಲಾಗಿದೆ. ಪಥಸಂಚಲನದ ಹೆಸರಿನಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ ಚಟುವಟಿಕೆಗಳು ನಡೆಯದಂತೆ ಆಯೋಜಕರು ಎಚ್ಚರಿಕೆ ವಹಿಸಬೇಕಿದೆ.
ಪಥಸಂಚಲನದಲ್ಲಿ ಪಾಲ್ಗೊಳ್ಳುವವರು ಪೊಲೀಸ್ ಇಲಾಖೆ ವಿಧಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಸಂಚಾರ ಮತ್ತು ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗದ ರೀತಿಯಲ್ಲಿ ಕಾರ್ಯಕ್ರಮ ನಡೆಸಬೇಕು ಎಂಬುದು ಅನುಮತಿಯ ಪ್ರಮುಖ ಷರತ್ತುಗಳಲ್ಲೊಂದಾಗಿದೆ.
ಪಥಸಂಚಲನದ ಮಾರ್ಗದಲ್ಲಿ ಜನಸಂದಣಿ ನಿಯಂತ್ರಿಸಲು ಆಯೋಜಕರು ಅಗತ್ಯ ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ನಿಯೋಜಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ. ಪಥಸಂಚಲನ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳುವುದು, ಸಾರ್ವಜನಿಕರಿಗೆ ಅನಗತ್ಯ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದು ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಸಹಕರಿಸುವುದು ಆಯೋಜಕರ ಜವಾಬ್ದಾರಿಯಾಗಿದೆ.
ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳ ಮೂಲಕ ಪಥಸಂಚಲನ ಸಾಗಲಿರುವ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಮತ್ತು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.






