ಕಲಬುರಗಿಯಲ್ಲಿ ಡಿ.13ರಂದು ‘ಸಾಹಿತ್ಯ ಸಾರಥಿ ಪ್ರಶಸ್ತಿ’ ಪ್ರದಾನ
ಸಾಹಿತ್ಯ, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ 14 ಸಾಧಕರಿಗೆ ಪ್ರಶಸ್ತಿ; ಇಬ್ಬರಿಗೆ ವಿಶೇಷ ಪುರಸ್ಕಾರ

ಕಲಬುರಗಿ: ಸಾಹಿತ್ಯ, ಮಾಧ್ಯಮ, ಸಮಾಜಸೇವೆ, ಶಿಕ್ಷಣ, ಹೋರಾಟ, ಸಂಘಟನೆ, ವೈದ್ಯಕೀಯ ಹಾಗೂ ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 14 ಸಾಧಕರನ್ನು ಪ್ರತಿಷ್ಠಿತ ‘ಸಾಹಿತ್ಯ ಸಾರಥಿ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
‘ಸಾಹಿತ್ಯ ಸಾರಥಿ’ ರಾಜ್ಯಮಟ್ಟದ ಪತ್ರಿಕೆಯ ಸಂಪಾದಕ ಹಾಗೂ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದು, ಡಿಸೆಂಬರ್ 13ರಂದು ಕಲಬುರಗಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಸುಬ್ರಾವ್ ಕುಲಕರ್ಣಿ, ಡಾ. ಹನುಮಂತರಾವ್ ದೊಡ್ಡಮನಿ ಹಾಗೂ ಡಾ. ಮಾಯಾದೇವಿ ಜಿ. ಮಾಲಿ ಪಾಟೀಲ್; ಮಾಧ್ಯಮ ಕ್ಷೇತ್ರದಲ್ಲಿ ಮಹಿಪಾಲ್ ರೆಡ್ಡಿ ಮುನ್ನೂರು ಹಾಗೂ ಶಿವರಂಜನ್ ಸತ್ಯಂಪೇಟೆ; ಸಮಾಜಸೇವೆಯಲ್ಲಿ ರಮೇಶ ತಿಪನೂರ ಹಾಗೂ ಡಾ. ವಿಶಾಲಾಕ್ಷಿ ಕರಡ್ಡಿ; ಶಿಕ್ಷಣ ಕ್ಷೇತ್ರದಲ್ಲಿ ಸಿದ್ದಪ್ಪ ಭಗವತಿ; ಹೋರಾಟ ಕ್ಷೇತ್ರದಲ್ಲಿ ಡಾ. ಶರಣು ಗದ್ದುಗೆ; ಸಂಘಟನಾ ಕ್ಷೇತ್ರದಲ್ಲಿ ನೀಲಕಂಠ ಜಮಾದಾರ; ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಮಹ್ಮದ್ ಗಫಾರ್ ಹಾಗೂ ರಂಗಭೂಮಿ ಕ್ಷೇತ್ರದಲ್ಲಿ ಗುರಪ್ಪ ಪಾಟೀಲ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇಬ್ಬರಿಗೆ ವಿಶೇಷ ಪುರಸ್ಕಾರ :
‘ಸಾಹಿತ್ಯ ಸಾರಥಿ ವಿಶೇಷ ಪುರಸ್ಕಾರ’ಕ್ಕೆ ಮಾಧ್ಯಮ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಬೆಂಗಳೂರಿನ ಚ.ಹ. ರಘುನಾಥ ಮತ್ತು ಸಾಹಿತ್ಯ ಹಾಗೂ ಕನ್ನಡ ಕ್ಷೇತ್ರದಲ್ಲಿ ಬೆಂಗಳೂರಿನ ಡಾ. ಸಂತೋಷ ಹಾನಗಲ್ ಅವರನ್ನು ಆಯ್ಕೆ ಮಾಡಲಾಗಿದೆ.
ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ, ಸಾಧನೆ ಹಾಗೂ ಕೊಡುಗೆಗಳ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಪ್ರಶಸ್ತಿಗಳು ಸಾಧಕರಿಗೆ ಮತ್ತಷ್ಟು ಪ್ರೋತ್ಸಾಹ ನೀಡುವುದರ ಜೊತೆಗೆ ಸಾಹಿತ್ಯ, ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳ ಬೆಳವಣಿಗೆಗೆ ಉತ್ತೇಜನ ನೀಡಲಿವೆ ಎಂದು ಬಿ.ಎಚ್. ನಿರಗುಡಿ ತಿಳಿಸಿದ್ದಾರೆ.






