ಮಕ್ಕಳು ದೃಷ್ಟಿ ವೈಫಲ್ಯ ಮರೆತು ಉನ್ನತ ಮಟ್ಟದಲ್ಲಿ ಸಾಧನೆ ಮಾಡಲಿ: ಶರಣಪ್ಪ ಎಸ್.ಡಿ. ಅಭಿಪ್ರಾಯ

ಕಲಬುರಗಿ ; ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ವಿಶೇಷ ಚೇತನರು ಮಹತ್ವದ ಹುದ್ದೆಗಳನ್ನು ಅಲಂಕಸಿರುವ ಮೂಲಕ ಬಹಳಷ್ಟು ಜನರಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಪೋಲಿಸ್ ಆಯುಕ್ತರಾದ ಡಾ. ಶರಣಪ್ಪ ಎಸ್. ಡಿ. ಅವರು ಅಭಿಪ್ರಾಯ ಪಟ್ಟರು.
ನಗರದ ಹೊರಹೊಲಯದ ಮಾದರಸನಹಳ್ಳಿ ಜಿಡಿಎ ಲೇಔಟ್ ನಲ್ಲಿರುವ ಮಾತೋಶ್ರೀ ಅಂಬುಬಾಯಿ ಅಂಧ ಬಾಲಕಿಯರ ವಸತಿಯುತ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಎಂಬುದು ಬಹಳಷ್ಟು ಮುಖ್ಯವಾಗಿದೆ. ತಮಗಿರುವ ಅಂಧತ್ವವನ್ನು ಮರೆತು ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆದು, ಸಮಾಜದಲ್ಲಿ ಉನ್ನತ ಅಧಿಕಾರಿಗಳಾಗಿ ಜನಸೇವೆ ಮಾಡುವುದರ ಮೂಲಕ ಕಣ್ಣಿದ್ದವರಿಗೆ ಮಾದರಿ ಯಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಶಾಲಾ ಸಂಸ್ಥಾಪಕ ಅಧ್ಯಕ್ಷರಾದ ದತ್ತು ಅಗರವಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ವತಿಯಿಂದ 50 ಮಕ್ಕಳಿಗೆ ಮಾತ್ರ ಶಿಕ್ಷಣ, ವಸತಿಗಾಗಿ ಅನುದಾನ ಬರುತ್ತದೆ. ಪ್ರತಿ ವರ್ಷ 50 ಕ್ಕೂ ಹೆಚ್ಚು ಮಕ್ಕಳು ನಮ್ಮ ಶಾಲೆಗೆ ಶಿಕ್ಷಣ ಸಲುವಾಗಿ ಬರುತ್ತಿದ್ದಾರೆ. ಬರುವ ವಿದ್ಯಾರ್ಥಿಗಳನ್ನು ಮರಳಿ ಕಳಿಸದೆ, 25 ಕ್ಕೂ ಹೆಚ್ಚು ಮಕ್ಕಳಿಗೆ ಸಂಸ್ಥೆಯ ವತಿಯಿಂದ ಶಿಕ್ಷಣ ಸೌಲಭ್ಯ ನೀಡುತ್ತಿದ್ದೇವೆ ಎಂದು ತಿಳಿಸಿದರು.
ನಮ್ಮ ಶಾಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಜೆ ಆದರೆ, ಬಹಳಷ್ಟು ಅನೈತಿಕ ಚಟುವಟಿಕೆಗಳನ್ನು ನಡೆಯುತ್ತವೆ. ಅಂಧ ಮಕ್ಕಳು ಇರುವುದರಿಂದ ನಮ್ಮ ಮಕ್ಕಳಿಗೆ ಭದ್ರತೆಯನ್ನು ಒದಗಿಸುವ ಮೂಲಕ ನಮ್ಮ ಮಕ್ಕಳು ಭಯ ಭೀತಿ ಇಲ್ಲದೆ ಓದಲು ಅನುಕೂಲ ಮಾಡಿಕೊಡಬೇಕು ಎಂದು ಆಯುಕ್ತರಲ್ಲಿ ಮನವಿ ಮಾಡಿದರು.
ಸಂಸ್ಥಾಪಕರ ಮನವಿಗೆ ಆಯುಕ್ತರು ಸ್ಥಳದಲ್ಲೇ ಸ್ಫಂಧನೆ: ಅಂಬುಬಾಯಿ ಅಂಧ ಬಾಲಕಿಯರ ಶಾಲಾ ಮಕ್ಕಳಿಗೆ ಹೆಚ್ಚಿನ ಪೋಲಿಸ್ ಭದ್ರತೆ ಒದಗಿಸುವ ಬೇಡಿಕೆಗೆ ಪೋಲಿಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರು ಸ್ಪಂದಿಸಿ ಸಂಜೆ ವೇಳೆಯಲ್ಲಿ ಹೆಚ್ಚಿನ ಭದ್ರತೆ(ಬೀಟ್) ಒದಗಿಸಲಾಗುತ್ತದೆ. ಶಾಲಾ ಮಕ್ಕಳಿಗೆ ಭದ್ರತೆ ನೀಡುವುದು ಜವಾಬ್ದಾರಿ ನಮ್ಮದು ಎಂದು ದತ್ತು ಅಗರವಾಲ ಅವರ ಮನವಿಗೆ ಸ್ಪಂದಿಸಿದರು. ಮನವಿಗೆ ಸ್ಪಂದಿಸಿದ ಆಯುಕ್ತರಿಗೆ ಶಾಲಾ ಸಂಸ್ಥಾಪಕರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಸಾಧಿಕ ಹುಸೇನ್ ಖಾನ, ಹೈದ್ರಾಬಾದ್ ಕರ್ನಾಟಕ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀಮತಿ ಶೋಭಾರಾಣಿ ಡಿ. ಅಗರವಾಲ್ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಠಾಕೂರ್ ಶಾಲಾ ವಾರ್ಷಿಕ ವಾಚನ ಮಾಡಿದರು. ಸಹ ಶಿಕ್ಷಕಿ ಕನ್ಯಾರಾಣಿ ನಿರೂಪಣೆ ಮಾಡಿದರು.
ಸಹ ಶಿಕ್ಷಕ ಮಹೇಶ ವಂದಿಸಿದರು.







