ಸೇಡಂ | ಸರಕಾರಿ ಶಾಲೆಯ ಮೇಲ್ಛಾವಣಿ ಕುಸಿತ; ಮೂವರು ವಿದ್ಯಾರ್ಥಿಗಳಿಗೆ ಗಾಯ

ಕಲಬುರಗಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದು ಮೂವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಶುಕ್ರವಾರ ಸೇಡಂ ತಾಲ್ಲೂಕಿನ ಮಲ್ಕಾಪಲ್ಲಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಮಲ್ಕಾಪಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ವೇಳೆ ಶಾಲಾ ಕೋಣೆಯ ಮೇಲ್ಛಾವಣಿ ಕುಸಿದು 8ನೇ ತರಗತಿಯ ಅಕ್ಷತಾ (13), ಕಾವೇರಿ (13) ಹಾಗೂ ಶ್ರೀನಿವಾಸ (13) ಗಾಯಗೊಂಡಿದ್ದು, ಕೂಡಲೇ ಸಮೀಪದ ಕೋಲಕುಂದ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಶಾಲೆಯಲ್ಲಿ 1 ರಿಂದ 8ನೇ ತರಗತಿ ವರೆಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ನಾಲ್ಕು ಕೊಠಡಿಗಳಿದ್ದು, ಸುಮಾರು 300 ವಿದ್ಯಾರ್ಥಿಗಳಿದ್ದಾರೆ.
ʼಮಲ್ಕಾಪಲ್ಲಿ ಗ್ರಾಮದ ಹಳೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಮೇಲ್ಛಾವಣಿ ಕುಸಿಯುವ ಸಾಧ್ಯತೆ ಇದೆ ಎಂದು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲʼ ಎಂದು ಗ್ರಾಪಂ ಸದಸ್ಯ ನವದರೆಡ್ಡಿ ಮಲ್ಕಾಪಲ್ಲಿ ಆರೋಪಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಅವರು ಸ್ಥಳಕ್ಕೆ ಭೇಟಿ ನೀಡಿ, ಶಾಲಾ ಕೊಠಡಿಗಳು ಪರಿಶೀಲಿಸಿದ ಬಳಿಕ ಮೇಲ್ಛಾವಣಿ ಕುಸಿದ ಕೋಣೆಯಲ್ಲಿ ತರಗತಿ ನಡೆಸಬಾರದು. ನಾಳೆಯಿಂದ ಬೇರೆ ಅನುಕೂಲಕರ ಜಾಗದಲ್ಲಿ ತರಗತಿಗಳು ನಡೆಸಬೇಕೆಂದು ಶಾಲಾ ಮುಖ್ಯಗುರುಗಳಿಗೆ ತಾಕೀತು ಮಾಡಿದ್ದಾರೆ.







