ಸೇಡಂ | ದುಗನೂರ ಗ್ರಾ.ಪಂ.ಯಲ್ಲಿ ಅವ್ಯವಹಾರ ಅರೋಪ : ತಾ.ಪಂ ಕಚೇರಿಗೆ ಮುತ್ತಿಗೆ

ಸೇಡಂ: ತಾಲೂಕಿನ ದುಗನೂರ ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಯಕ ಮಿತ್ರರಾದ ಅನುರಾಧ ಸಾಬ್ಬಣ್ಣ ಅವರನ್ನು ಸೇವೆಯಿಂದ ವಜಾಗೋಳಿಸಬೇಕೆಂದು ಒತ್ತಾಯಿಸಿ ತಾಲೂಕು ಬಹುಜನ ಸಮಾಜ ಪಕ್ಷದ ವತಿಯಿಂದ ತಾ.ಪಂ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನರೇಗಾ ಯೋಜನೆ ಅಡಿಯಲ್ಲಿ ಭ್ರಷ್ಟಾಚಾರ ಮಾಡಿದ ಕಾಯಕಮಿತ್ರ ಅನುರಾಧ ಸಾಬ್ಬಣ್ಣ ಅವರ ವಿರುದ್ಧ ದಾಖಲೆ ಸಮೇತ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಸಹಾಯಕ ನಿರ್ದೇಶಕರು (ನರೇಗಾ ಎ.ಡಿ) ತಾಪಂ ಅಧಿಕಾರಿಗಳನ್ನು ದೂರು ಕೊಟ್ಟಿದ್ದೆವು. ಆದರೆ, ದೂರು ನೀಡಿ ಮೂರು ತಿಂಗಳು ಗತಿಸಿದರೂ ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸುತ್ತಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಕ್ಷದ ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ಸಿಂಧೆ ಆಗ್ರಹಿಸಿದ್ದಾರೆ.
ನರೇಗಾ ಯೋಜನೆ ಅಡಿಯಲ್ಲಿ ಕಾರ್ಯನಿವಹಿಸುತ್ತಿರುವ ಅನುರಾಧ ಸಾಬ್ಬಣ್ಣ ಅವರಿಗೆ ಮೇಲಾಧಿಕಾರಿಗಳಿಗೆ ಬೆಂಬಲ ಹಾಗೂ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ಮತ್ತು ಹಣದ ಆಮಿಷ ಒಡ್ಡಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ, ಈ ಕುರಿತು ಸ್ಥಳೀಯ ಶಾಸಕರ ಗಮನಕ್ಕೆ ಇದ್ದರೂ, ಜನಪರ ಇರಬೇಕಾಗಿದವರು ಭ್ರಷ್ಟಾಚಾರ ಅಧಿಕಾರಿ ಪರ ನಿಂತಿದ್ದು ಕಂಡು ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೇ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಹಾಯಕ ನಿರ್ದೇಶಕರು (ನರೇಗಾ ಎ.ಡಿ) ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಒತ್ತಾಯ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಬಹುಜನ ಸಮಾಜ ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.







