Sedam | ಪ್ರಶಸ್ತಿಗಳು ಕರ್ತವ್ಯದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ: ಪ್ರಭಾಕರ ಜೋಶಿ

ಸೇಡಂ: ಸಮಾಜದಲ್ಲಿ ನಾವು ಮಾಡುವ ಕೆಲಸವನ್ನು ಗುರುತಿಸಿ ನೀಡುವ ಪ್ರಶಸ್ತಿಗಳು ಕರ್ತವ್ಯದ ಜೊತೆಗೆ ಜವಾಬ್ದಾರಿಯನ್ನೂ ಹೆಚ್ಚಿಸುತ್ತವೆ ಎಂದು ವಿ.ಎನ್. ಕಾಗಲಕರ್ ಪ್ರಶಸ್ತಿ ಪುರಸ್ಕೃತ ಹಾಗೂ ರಂಗಾಯಣದ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.
ಪಟ್ಟಣದ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಆಯೋಜಿಸಿದ್ದ ವಿವಿಧ ಪ್ರಶಸ್ತಿ ಪುರಸ್ಕೃತ ಪತ್ರಕರ್ತರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೇಡಂ ನೆಲದಲ್ಲಿ ಸಹಕಾರ ಹಾಗೂ ಸೌಹಾರ್ದತೆಯ ವಾತಾವರಣವಿದ್ದು, ಇಲ್ಲಿನ ಅನೇಕ ಪ್ರತಿಭೆಗಳು ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರಶಸ್ತಿ ಪುರಸ್ಕೃತರನ್ನು ಸ್ಥಳೀಯ ಪತ್ರಕರ್ತರು ಒಗ್ಗಟ್ಟಿನಿಂದ ಗೌರವಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಹೇಳಿದರು.
ಕುಮಾರಶ್ರೀ ಪ್ರಶಸ್ತಿ ಪುರಸ್ಕೃತ ಮಹಿಪಾಲರೆಡ್ಡಿ ಮುನ್ನೂರ ಮಾತನಾಡಿ, ಸೇಡಂನ ಪತ್ರಕರ್ತರು ತಮ್ಮ ಬರವಣಿಗೆಯ ಮೂಲಕ ಸಮಾಜದಲ್ಲಿ ವಿಶೇಷ ಗುರುತನ್ನು ಮೂಡಿಸಿದ್ದಾರೆ. ಯುವ ಪತ್ರಕರ್ತರು ವೈಯಕ್ತಿಕ ಸುದ್ದಿಗಳಿಗಿಂತ ಸಮಾಜಮುಖಿ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ವಿ.ಎನ್. ಕಾಗಲಕರ್ ಪ್ರಶಸ್ತಿ ಪುರಸ್ಕೃತ ದೇವೇಂದ್ರಪ್ಪ ಆವಂಟಿ ಮಾತನಾಡಿ, ಪ್ರಶಸ್ತಿ ದೊರೆತಿರುವುದು ಸಂತಸದ ವಿಷಯ. ಆದರೆ ತವರು ನೆಲದ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಅಭಿನಂದಿಸಿ ಸನ್ಮಾನಿಸಿರುವುದು ಮತ್ತಷ್ಟು ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಶರಣು ಮಹಾಗಾಂವ ಹಾಗೂ ಪಾಟೀಲ ಪುಟ್ಟಪ್ಪ ಪ್ರಶಸ್ತಿ ಪುರಸ್ಕೃತ ಸಿದ್ದಯ್ಯಸ್ವಾಮಿ ಆಡಕಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಂಘದ ತಾಲೂಕು ಘಟಕದ ಉಪಾಧ್ಯಕ್ಷ ಜಗನ್ನಾಥ ತರನಳ್ಳಿ ಸೇರಿದಂತೆ ಹಲವು ಪತ್ರಕರ್ತರು ಉಪಸ್ಥಿತರಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಘಟಕದ ಗೌರವ ಸಲಹೆಗಾರ ನಾಗಯ್ಯಸ್ವಾಮಿ ಬೊಮ್ನಳ್ಳಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸುಧೀರ ಬಿರಾದಾರ, ಕಾರ್ಯದರ್ಶಿ ಅವಿನಾಶ ಬೋರಂಚಿ, ರಾಧಾಕೃಷ್ಣ, ಸದಸ್ಯ ಗಣೇಶ ನೀಲಹಳ್ಳಿ, ಪ್ರಮುಖರಾದ ಬಸನಗೌಡ ಮದ್ನಿ, ಭೀಮರಾವ ಹಲಕರ್ಟಿ ಇದ್ದರು.






