Sedam | ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ನೋಟ್‌ಬುಕ್, ಪೆನ್ ವಿತರಣೆ

ಸೇಡಂ: ತಾಲೂಕಿನ ಹುಡಾ (ಎಂ) ಗ್ರಾಮದ ಜನತಾ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಅಂಗವಾಗಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.
ಶಾಲಾ ಪ್ರಾರಂಭೋತ್ಸವದ ಸ್ಮರಣಾರ್ಥವಾಗಿ ಮಾಜಿ ಎಪಿಎಂಸಿ ಅಧ್ಯಕ್ಷ ಗುರುನಾಥ್ ರೆಡ್ಡಿ ಪಾಟೀಲ್ ಹುಡಾ (ಎಂ) ಅವರು ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಹಾಗೂ ಪೆನ್ನುಗಳನ್ನು ವಿತರಿಸಿ, ಸಿಹಿ ತಿನಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಅವರು ಮಾತನಾಡಿ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಾರ್ವಜನಿಕರು ಹಾಗೂ ದಾನಿಗಳ ಸಹಕಾರ ಅತ್ಯಗತ್ಯವಾಗಿದೆ. ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಅಭಿವೃದ್ಧಿಗೆ ಇಂತಹ ನೆರವುಗಳು ಪ್ರೇರಣಾದಾಯಕವಾಗಿದ್ದು, ವಿದ್ಯಾರ್ಥಿಗಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುರಳಿಧರ ರೆಡ್ಡಿ, ಶಾಲೆಯ ಮುಖ್ಯಗುರು ಉಮಾಕಾಂತ, ಶಿಕ್ಷಕರಾದ ಯಲ್ಲಪ್ಪ ಪೂಜಾರಿ, ರಮೇಶ್ ಕಡಗಂಚಿ, ಮುದೋಳ, ಸಿಆರ್‌ಪಿ ಶರಣಪ್ಪ ಪರಮಾ, ಸಹ ಶಿಕ್ಷಕರಾದ ಕೌಸರ್ ಬೇಗಂ ಹಾಗೂ ಜ್ಯೋತಿ ಉಪಸ್ಥಿತರಿದ್ದರು.
ಇದೇ ವೇಳೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷ ಕೋಕಿಲ್ ಹಾಗೂ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಮತ್ತು ಶಿಕ್ಷಣಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಶುಭ ಹಾರೈಸಿದರು.
ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಜಾಕನಪಲ್ಲಿ, ಇಂಜಳಿ, ನಾಡೇಪಲ್ಲಿ, ಕನ್ಯಾ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2, ಎಂಪಿಎಸ್ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದ ವಿವಿಧ ಶಾಲೆಗಳಲ್ಲಿ ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿ, ಉಚಿತ ಪೆನ್ ಮತ್ತು ಪುಸ್ತಕಗಳನ್ನು ವಿತರಿಸುವ ಮೂಲಕ ಹೊಸ ಶೈಕ್ಷಣಿಕ ವರ್ಷವನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.






