Sedam | ಪರಿಶುದ್ಧ ಮನಸ್ಸಿನಿಂದ ಬದುಕಿದಾಗಲೇ ಜೀವನ ಸಾರ್ಥಕ: ಸದಾಶಿವ ಮಹಾಸ್ವಾಮಿಗಳು

ಸೇಡಂ: ಪ್ರತಿಯೊಬ್ಬ ಮನುಷ್ಯ ತನ್ನ ಅಂತರಂಗದಲ್ಲಿರುವ ಕಲ್ಮಶಗಳನ್ನು ತೊಳೆದು ಪರಿಶುದ್ಧ ಮನಸ್ಸಿನೊಂದಿಗೆ ಬದುಕು ಸಾಗಿಸಿದಾಗ ಮಾತ್ರ ಜೀವನ ಸಾರ್ಥಕಗೊಳ್ಳುತ್ತದೆ ಎಂದು ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಮಹಾಸ್ವಾಮಿಗಳು ಹೇಳಿದರು.
ನಗರದ ಸೇಡಂ–ಕಲಬುರಗಿ ರಸ್ತೆಯಲ್ಲಿರುವ ಶ್ರೀ ದಾನಮ್ಮದೇವಿ ದೇವಾಸ್ಥಾನದಲ್ಲಿ ಅಖಿಲ ಭಾರತ ಶರಣ ಸಮನ್ವಯ ವೇದಿಕೆ ಆಯೋಜಿಸಿದ್ದ ಜೀವನ ದರ್ಶನ ಮಾಸಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಧರ್ಮದ ಹಾದಿಯಲ್ಲಿ ನಡೆಯುವಾಗ ಬಾಹ್ಯ ಆಚರಣೆಗಳಿಗಿಂತ ಮನಸ್ಸಿನ ಪರಿಶುದ್ಧತೆ ಮುಖ್ಯವಾಗಿದೆ. ಅಹಂಕಾರ, ಸ್ವಾರ್ಥ ಮತ್ತು ಮನಸ್ಸಿನ ಕಲ್ಮಶಗಳನ್ನು ದೂರ ಮಾಡಿ ಪರಿಶುದ್ಧ ಮನಸ್ಸಿನಿಂದ ಜೀವನ ನಡೆಸಬೇಕು. ಹೆಚ್ಚಿನ ಸಮಯವನ್ನು ಸತ್ಸಂಗ ಮತ್ತು ಧರ್ಮಚಿಂತನೆಗೆ ಮೀಸಲಿಡಬೇಕು ಎಂದು ಅವರು ಸಲಹೆ ನೀಡಿದರು.
ಶಿವಕುಮಾರ ನಿಡಗುಂದಾ ಮಾತನಾಡಿ, ಮನುಷ್ಯ ತನ್ನೊಳಗಿನ ಕಲ್ಮಶವನ್ನು ತೊಳೆದು ಆತ್ಮಶುದ್ಧಿಯೊಂದಿಗೆ ಬದುಕುವುದೇ ನಿಜವಾದ ಶರಣ ತತ್ವ ಮತ್ತು ಧರ್ಮದ ಸಾರವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ಶರಣರ ಕೊಡುಗೆ ಅಪಾರವಾಗಿದ್ದು, ಜಗತ್ತಿಗೆ ಮೊಟ್ಟಮೊದಲ ಸಂಸತ್ತು ಹಾಗೂ ದಾಸೋಹ ಪರಂಪರೆಯನ್ನು ಪರಿಚಯಿಸಿದ ಕೀರ್ತಿ ಶರಣರಿಗೆ ಸಲ್ಲುತ್ತದೆ ಎಂದರು.
ಅಖಿಲ ಭಾರತ ಶರಣ ಸಮನ್ವಯ ವೇದಿಕೆಯ ರಾಜ್ಯ ಸಂಚಾಲಕಿ ಡಾ. ಪಲ್ಲವಿ ಪಾಟೀಲ ಮಾತನಾಡಿ, ಶರಣರ ಶ್ರೇಷ್ಠ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಜಕೀಯ ಹಾಗೂ ಬಂಡವಾಳಶಾಹಿಗಳ ಕುತಂತ್ರದಿಂದ ಸಾಮಾಜಿಕ ಸಾಮರಸ್ಯ ಹಾಳಾಗುತ್ತಿದ್ದು, ಪಾಲಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಿ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.
ತಾಲೂಕು ಅಧ್ಯಕ್ಷ ನಾಗಯ್ಯಸ್ವಾಮಿ ಬೊಮ್ನಳ್ಳಿ ಮಾತನಾಡಿದರು.
ಭಾಗ್ಯಲಕ್ಷ್ಮಿ–ಚಂದ್ರಕಾಂತ ನಾಯಿಕೋಡಿ ದಂಪತಿ ದೀಪ ಪ್ರಜ್ವಲನೆ ಮಾಡಿದರು. ವೀರಶೈವ ಮಹಿಳಾ ಮಂಡಳಿಯ ಅಧ್ಯಕ್ಷೆ ಚನ್ನಮ್ಮ ಪಾಟೀಲ ವೇದಿಕೆಯಲ್ಲಿದ್ದರು. ಬಸವರಾಜ ಬಾಳಿ ಪ್ರಾರ್ಥಿಸಿ ವಂದಿಸಿದರು. ಶಿಕ್ಷಕಿ ಮಹಾದೇವಿ ಹಲಕಟ್ಟಿ ಕಾರ್ಯಕ್ರಮ ನಿರೂಪಿಸಿದರು.






