ಸೇಡಂ | ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ ಪತ್ತೆ: ಕೊಲೆ ಶಂಕೆ

ಸೇಡಂ: ತಾಲೂಕಿನ ಅಳೋಳ್ಳಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಅಳೋಳ್ಳಿ ಗ್ರಾಮದ ನಿವಾಸಿ ಸಾಬಣ್ಣ ಶ್ಯಾಮರಾವ್ (40) ಎಂದು ಗುರುತಿಸಲಾಗಿದೆ. ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಶನಿವಾರ ಮುಂಜಾನೆ ಗ್ರಾಮದ ಹೊರವಲಯದಲ್ಲಿರುವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ.
ಮೃತದೇಹದ ಮೇಲಿದ್ದ ಬಟ್ಟೆಯ ಮೇಲೆ ರಕ್ತದ ಕಲೆಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ, ಇದು ಆತ್ಮಹತ್ಯೆಯೋ ಅಥವಾ ಕೊಲೆ ಮಾಡಿ ಬಳಿಕ ನೇಣು ಹಾಕಿರುವುದೋ ಎಂಬ ಅನುಮಾನಗಳು ಸ್ಥಳೀಯರಲ್ಲಿ ಮೂಡಿವೆ.
ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸೇಡಂ ಪೊಲೀಸರು ಪರಿಶೀಲನೆ ನಡೆಸಿ, ಸ್ಥಳ ಮಹಜರು ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೇಡಂ ಪೊಲೀಸ್ ಠಾಣೆಯ ಪಿಎಸ್ಸೈ ಉಪೇಂದ್ರ ಕುಮಾರ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ವಿವಿಧ ಆಯಾಮಗಳಲ್ಲಿ ಪ್ರಕರಣದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.




