ಸೇಡಂ | ವಾಣಿಜ್ಯ ಮಳಿಗೆಗಳ ಕಟ್ಟಡ ಉದ್ಘಾಟಿಸಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್

ಸೇಡಂ: ಪಟ್ಟಣದ ಹೃದಯ ಭಾಗದಲ್ಲಿ ಸರ್ಕಾರದಿಂದ ಬೃಹತ್ ವಾಣಿಜ್ಯ ಮಳಿಗೆಗಳ ಕಟ್ಟಡ ನಿರ್ಮಿಸುವ ಮೂಲಕ ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದ ಸಮೀಪ, ಮುಖ್ಯರಸ್ತೆಗೆ ಹೊಂದಿಕೊಂಡಂತೆ ಕೆಆರ್‌ಐಡಿಎಲ್ ವತಿಯಿಂದ ಸುಮಾರು 2.99 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ವಾಣಿಜ್ಯ ಮಳಿಗೆಗಳ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಈ ಕಟ್ಟಡಕ್ಕೆ ಅನುದಾನ ಒದಗಿಸಲಾಗಿತ್ತು. ಆದರೆ ಹಿಂದಿನ ಸರ್ಕಾರ ಇದಕ್ಕೆ ಕಾಯಕಲ್ಪ ನೀಡಲು ವಿಫಲವಾಗಿತ್ತು. ಇದೀಗ ಮತ್ತೆ ನಾನು ಚುನಾಯಿತನಾಗಿ ಬಂದ ಬಳಿಕ ಈ ಕಟ್ಟಡವನ್ನು ಸಾರ್ವಜನಿಕರಿಗೆ ಸಮರ್ಪಿಸುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.
ಈ ಕಟ್ಟಡದಲ್ಲಿ ಒಟ್ಟು 42 ಅಂಗಡಿಗಳನ್ನು ನಿರ್ಮಿಸಲಾಗಿದ್ದು, ಜೊತೆಗೆ ಖಾಲಿ ಜಾಗವನ್ನೂ ವಿವಿಧ ವ್ಯಾಪಾರ ಚಟುವಟಿಕೆಗಳಿಗೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಕಟ್ಟಡವನ್ನು ನಗರಸಭೆಗೆ ಹಸ್ತಾಂತರಿಸಲಾಗಿದ್ದು, ನಿಯಮಾನುಸಾರ ಬಾಡಿಗೆದಾರರಿಗೆ ಮಳಿಗೆಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕೆಆರ್‌ಐಡಿಎಲ್ ಇಇ ನೀಲಕಂಡ ರಾಠೋಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ್, ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್ ಶ್ರೀಯಾಂಕಾ ಧನಶ್ರೀ, ಡಿವೈಎಸ್‌ಪಿ ಸಂಗಮನಾಥ ಹಿರೇಮಠ, ನಗರಸಭೆ ಪೌರಾಯುಕ್ತ ಶರಣಯ್ಯಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ನಾಗೇಶ್ವರಾವ ಮಾಲೀಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್ ಸೇರಿದಂತೆ ಜಗದೇವಪ್ಪ ಪಾಟೀಲ್ ಕೊಂಕನಹಳ್ಳಿ, ವೆಂಕಟೇಶ ನಾಡೇಪಲ್ಲಿ, ಶರಣಗೌಡ ನಾಚವಾರ, ಗುರುನಾಥರೆಡ್ಡಿ ಪಾಟೀಲ್, ಶ್ರೀನಿವಾಸ ಪ್ಯಾಟಿ, ಮಹ್ಮದ್ ಗೌಸ, ದೀಪಕ ಎಂ.ಜಿ, ಶ್ರೀನಿವಾಸರೆಡ್ಡಿ ಕೋಲಕುಂದಾ, ಸಂತೋಷ ತಳವಾರ, ಬಸವರಾಜ ಮಾಲೀಪಾಟೀಲ್ ಊಡಗಿ, ನೀಲಕಂಠ ಹಂಗನಹಳ್ಳಿ, ಜಗದೇವಯ್ಯ ಬಂಡಾ ಮತ್ತಿತರರು ಉಪಸ್ಥಿತರಿದ್ದರು.







