Sedam | ಕುಡಿಯುವ ನೀರಿಗೆ ಆದ್ಯತೆ ನೀಡಿ, ಕೈಗಾರಿಕೆಗಳಿಗೆ ನೀರು ಪೂರೈಕೆ ಕಡಿತಗೊಳಿಸಿ: ಮುಕ್ರಂಖಾನ್

ಸೇಡಂ: ಸಕಾಲಕ್ಕೆ ಮಳೆಯಾಗದೆ ತಾಲೂಕಿನಲ್ಲಿ ಬರದ ಛಾಯೆ ಮೂಡಿದ್ದು, ಮತಕ್ಷೇತ್ರದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಕಾಗಿಣಾ ಮತ್ತು ಕಮಲಾವತಿ ನದಿ ವ್ಯಾಪ್ತಿಯ ಗ್ರಾಮಗಳಲ್ಲಿ ತೀವ್ರಗೊಳ್ಳುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೈಗಾರಿಕೆಗಳಿಗೆ ಪೂರೈಸುವ ನೀರಿನ ಪ್ರಮಾಣ ಕಡಿತಗೊಳಿಸಿ, ಗ್ರಾಮಗಳಿಗೆ ಸಮರ್ಪಕವಾಗಿ ನೀರು ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುಕ್ರಂಖಾನ್ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಕುಡಿಯುವ ನೀರಿನ ಸರಬರಾಜನ್ನು ಮಿತಿಗೊಳಿಸಲಾಗುತ್ತಿದ್ದರೂ ಕೈಗಾರಿಕೆಗಳಿಗೆ ನಿರ್ಬಂಧವಿಲ್ಲದೆ ನೀರು ಪೂರೈಕೆಯಾಗುತ್ತಿದೆ. ಕೈಗಾರಿಕೆಗಳಿಗೆ ನೀಡುತ್ತಿರುವ ನೀರಿನ ಸರಬರಾಜನ್ನು ನಿಯಂತ್ರಿಸಿ, ಮೊದಲು ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಬೇಕು. ಕೈಗಾರಿಕೆಗಳಿಗಿಂತ ಜನಸಾಮಾನ್ಯರು ಹಾಗೂ ಜಾನುವಾರುಗಳ ಹಿತ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆದ್ದರಿಂದ ಗ್ರಾಮಗಳಿಗೆ ಶೀಘ್ರ ಸಮರ್ಪಕವಾಗಿ ನೀರು ಪೂರೈಸಬೇಕು ಎಂದು ಆಗ್ರಹಿಸಿದ್ದಾರೆ.
ಮಳಖೇಡದ ರಾಜಶ್ರೀ ಸಿಮೆಂಟ್, ಸೇಡಂನ ಅಲ್ಟ್ರಾಟೆಕ್, ಕೋಡ್ಲಾದ ಶ್ರೀ ಸಿಮೆಂಟ್, ವಿಕಟ್ ಸಾಗರ್, ಚೆಟ್ಟಿನಾಡು ಸೇರಿದಂತೆ ಪ್ರಮುಖ ಕೈಗಾರಿಕೆಗಳಿಗೆ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣ ಹಾಗೂ ಗ್ರಾಮಗಳಲ್ಲಿನ ನೀರಿನ ಬಳಕೆಯ ಕುರಿತು ಸಮಗ್ರ ವರದಿ ಸಿದ್ಧಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿ ಪಿಡಿಒಗಳ ಬಳಿ ಕೊಳವೆಬಾವಿ ದುರಸ್ತಿಗೊಳಿಸಿ ನೀರಿನ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರೆ, ಅನುದಾನದ ಕೊರತೆಯ ನೆಪ ಹೇಳಲಾಗುತ್ತಿದೆ. ಇಂತಹ ನೆಪಗಳನ್ನು ಹೇಳದೆ ನೀರಿನ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಸಮಸ್ಯೆಗಳ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ಗಂಭೀರವಾಗಿದ್ದು, ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನಿಯಮಾನುಸಾರ ಕೈಗಾರಿಕೆಗಳಿಗೆ ನೀರು ಪೂರೈಸುವುದನ್ನು ತಾತ್ಕಾಲಿಕವಾಗಿ ತಡೆಹಿಡಿದು, ಜನರ ದಾಹ ತಣಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮುಕ್ರಂಖಾನ್ ಆಗ್ರಹಿಸಿದ್ದಾರೆ.






