Sedam | ಜ್ಞಾನ, ಮೌಲ್ಯಗಳಿಂದ ವಿದ್ಯಾರ್ಥಿಗಳು ರಾಷ್ಟ್ರ ನಿರ್ಮಾತೃಗಳಾಗಬೇಕು: ಎ.ಕೆ.ರಾಮೇಶ್ವರ

ಸೇಡಂ: ವಿದ್ಯಾರ್ಥಿಗಳು ಜ್ಞಾನ, ಸಾಹಿತ್ಯ ಹಾಗೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ನಾಡಿನ ದೊಡ್ಡ ಸಂಪತ್ತುಗಳಾಗಿ ಭವಿಷ್ಯದ ರಾಷ್ಟ್ರ ನಿರ್ಮಾತೃಗಳಾಗಬೇಕು ಹಾಗೂ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು ಎಂದು ಮಕ್ಕಳ ಸಾಹಿತ್ಯಲೋಕದ ಹಿರಿಯ ಕವಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಹಿತಿ ಎ.ಕೆ. ರಾಮೇಶ್ವರ ಕರೆ ನೀಡಿದರು.
ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಶ್ರೀಮತಿ ನಥಿಬಾಯಿ ಸೀತಾರಾಮ ಜೇಠಮಲ್ ತಾಪಾಡಿಯಾ ಮಾತೃಛಾಯಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ್ಞಾನ ದಾಸೋಹವೇ ಶ್ರೇಷ್ಠ ದಾಸೋಹ ಎಂದು ಪ್ರತಿಪಾದಿಸಿದರು.
ಪಡೆದ ಜ್ಞಾನವನ್ನು ವೈಯಕ್ತಿಕ ಬದುಕಿನ ಉನ್ನತಿಗೆ ಮಾತ್ರ ಸೀಮಿತಗೊಳಿಸದೆ ಸಮಾಜದ ಒಳಿತಿಗಾಗಿ ಹಂಚಿಕೊಳ್ಳುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ವ್ಯಕ್ತಿತ್ವ ನಿರ್ಮಾಣ ಮತ್ತು ಸಮಾಜ ಪರಿವರ್ತನೆಯ ಶಕ್ತಿಯಾಗಿದೆ ಎಂದು ಹೇಳಿದರು.
ರಂಗಭೂಮಿ ಕಲಾವಿದ, ಹಿರಿಯ ಸಾಹಿತಿ ಹಾಗೂ ಕಲಬುರಗಿ ರಂಗಾಯಣದ ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ಅಧ್ಯಯನವು ಪ್ರದರ್ಶನಕ್ಕಲ್ಲ, ಜ್ಞಾನ ಸಂಪಾದನೆ ಮತ್ತು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕಾಗಿ ಇರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಸಂಸ್ಥೆಯ ಅಧ್ಯಕ್ಷ ಪರಮಪೂಜ್ಯ ಡಾ. ಸದಾಶಿವ ಮಹಾಸ್ವಾಮಿಗಳು ವಹಿಸಿದ್ದರು. ಸಾಹಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಚನ್ನಬಸಪ್ಪ ಗವಿ, ಪ್ರಧಾನ ಗುರು ಮನಸೂರ ಅವಂಟಿ, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಿರಿಯ ಉಪನ್ಯಾಸಕ ರಾಜಕುಮಾರ ಚನ್ನಿರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಪಠ್ಯದ ಕವಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ಉಡುಗೊರೆ :
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ, ಪ್ರಾಥಮಿಕ ಶಾಲಾ ಪಠ್ಯಪುಸ್ತಕದಲ್ಲಿ ಪದ್ಯ ರಚಿಸಿರುವ ಕವಿ ಎ.ಕೆ. ರಾಮೇಶ್ವರ ಅವರು ವಿದ್ಯಾರ್ಥಿಗಳಿಗೆ ಸ್ವತಃ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದರು.
ತಾವು ಪಠ್ಯದಲ್ಲಿ ಓದಿದ್ದ ಕವಿಯನ್ನು ನೇರವಾಗಿ ಭೇಟಿ ಮಾಡಿ, ಅವರೊಂದಿಗೆ ಕೈಕುಲುಕಿದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು. ಕವಿ ಎ.ಕೆ. ರಾಮೇಶ್ವರ ಅವರ ‘ಕಲಬುರಗಿಯ ಶ್ರೀ ಶರಣಬಸವೇಶ್ವರರು’ ಕೃತಿಯನ್ನು ಸುಮಾರು 100 ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು.






