Sedam | ಸಿಡಿಲು ಬಡಿದು ಇಬ್ಬರು ಮೃತ್ಯು

ಸಾಂದರ್ಭಿಕ ಚಿತ್ರ
ಸೇಡಂ : ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ಸಂಜೆ ಸುರಿದ ಭಾರೀ ಮಳೆ, ಗಾಳಿ ಹಾಗೂ ಸಿಡಿಲಿಗೆ ಇಬ್ಬರು ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ಸಂಭವಿಸಿವೆ.
ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯ ಜಾಕನಪಲ್ಲಿ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತ ನರಸಪ್ಪ (60) ಹಾಗೂ ಅವರ ಎತ್ತು ಸ್ಥಳದಲ್ಲೇ ಮೃತಪಟ್ಟಿದೆ. ಸಂಜೆ ವೇಳೆ ಮಳೆ ಹಾಗೂ ಬಿರುಗಾಳಿ ಆರಂಭವಾಗಿದ್ದರೂ ನರಸಪ್ಪ ಹೊಲದಲ್ಲೇ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ ಭಾರೀ ಸಿಡಿಲು ಬಡಿದ ಪರಿಣಾಮ ಅವರು ಮತ್ತು ಎತ್ತು ಸಾವನ್ನಪ್ಪಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಮುಧೋಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇನ್ನೊಂದು ಘಟನೆ ಪಾಕಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನಡೆಯುತ್ತಿದ್ದ ವೇಳೆ ಸ್ಮಶಾನ ಭೂಮಿಯಲ್ಲಿ ಸಿಡಿಲು ಬಡಿದ ಪರಿಣಾಮ ಲಕ್ಷ್ಮಣ ಬಡಿಗೇರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಂಬಂಧವೂ ಮುಧೋಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಗುರುವಾರ ಸಂಜೆ ಸುರಿದ ಮಳೆ, ಗಾಳಿ ಹಾಗೂ ನಿರಂತರ ಸಿಡಿಲಿನಿಂದ ಸೇಡಂ ಭಾಗದ ಜನರು ಭಯಭೀತರಾಗಿದ್ದು, ರೈತರು ಹಾಗೂ ಸಾರ್ವಜನಿಕರು ಮಳೆ ವೇಳೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.






