Sedam | ವಾರ್ತಾಭಾರತಿ ವರದಿ ಫಲಶ್ರುತಿ : ನೀರು ವ್ಯರ್ಥವಾಗುತ್ತಿದ್ದ ಸಮಸ್ಯೆಗೆ ದುರಸ್ತಿ ಕಾರ್ಯ ಆರಂಭ

ಸೇಡಂ : ನಗರದ ಜ್ಯೂನಿಯರ್ ಸಮೀಪದ ರಸ್ತೆಯಲ್ಲಿ ಹಲವು ದಿನಗಳಿಂದ ಅಪಾರ ಪ್ರಮಾಣದ ಕುಡಿಯುವ ನೀರು ರಸ್ತೆ ಮೇಲೆ ಹರಿದು ವ್ಯರ್ಥವಾಗುತ್ತಿದ್ದ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ವಾರ್ತಾ ಭಾರತಿಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ನಗರಸಭೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ದುರಸ್ತಿ ಕಾರ್ಯ ಆರಂಭಿಸಿದ್ದಾರೆ.
ನಗರದ ಪ್ರಮುಖ ರಸ್ತೆಯಲ್ಲಿನ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಉಂಟಾಗಿ ನೀರು ನಿರಂತರವಾಗಿ ರಸ್ತೆ ಪಾಲಾಗುತ್ತಿತ್ತು. ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಅಮೂಲ್ಯವಾದ ಕುಡಿಯುವ ನೀರು ವ್ಯರ್ಥವಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಸಮಸ್ಯೆ ಕುರಿತು ಹಲವು ಬಾರಿ ಗಮನ ಸೆಳೆದರೂ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ವರದಿ ಪ್ರಕಟವಾದ ಬಳಿಕ ನಗರಸಭೆ ಪೌರಾಯುಕ್ತ ಶರಣಯ್ಯ ಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಪೈಪ್‌ಲೈನ್ ಒಡೆದಿರುವುದಲ್ಲ, ಕುಡಿಯುವ ನೀರಿನ ಟ್ಯಾಂಕ್ ತುಂಬಿ ನೀರು ರಸ್ತೆ ಮೇಲೆ ಹರಿಯುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ದುರಸ್ತಿ ಹಾಗೂ ನೀರು ಪೋಲಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದುರಸ್ತಿ ಕಾರ್ಯ ಆರಂಭಿಸಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮಸ್ಯೆಗಳು ಗಂಭೀರವಾಗುವ ಮೊದಲುಲೇ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.






