ಸೇಡಂ | ಡಾ.ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಕಾಮಗಾರಿ ಪ್ರಾರಂಭಿಸಿ: ರೇವಣಸಿದ್ದಪ್ಪ ಶಿಂಧೆ

ಸೇಡಂ: ತಾಲೂಕಿನ ಭೊಂದೇಮಪಳ್ಳಿ ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಸ್ಥಾಪನೆಗೆ ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದಾರೆ. ಕೂಡಲೇ ಮೂರ್ತಿ ಸ್ಥಾಪನೆ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಬಹುಜನ ಸಮಾಜ ಪಕ್ಷದ ತಾಲೂಕು ಮುಖಂಡ ರೇವಣಸಿದ್ದಪ್ಪ ಶಿಂಧೆ ಆಗ್ರಹಿಸಿದರು.
ಈ ಕುರಿತು ಮಾತನಾಡಿದ ಅವರು, ಕೆಲವು ದಿನಗಳ ಹಿಂದೆ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಸಮ್ಮುಖದಲ್ಲಿ ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಸಂಬಂಧಿಸಿದಂತೆ ಜಿಪಿಎಸ್ ಫೋಟೋ ತೆಗೆದು ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಆದರೆ ಮೂರ್ತಿ ಸ್ಥಾಪನೆ ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಎಂದು ಹೇಳಿ ಕೆಲವು ವ್ಯಕ್ತಿಗಳು ಅಧಿಕಾರಿಗಳು ಹಾಗೂ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ ಕಾಮಗಾರಿ ನಿಲ್ಲಿಸುವಂತೆ ಒತ್ತಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ರಸ್ತೆ ಮಧ್ಯದಲ್ಲಿ ಇರುವ ಅಂಬೇಡ್ಕರ್ ಮೂರ್ತಿ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಮುಂದುವರಿಸಬಾರದು ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ಅವರು ಹೇಳಿದರು.
ತಾಲೂಕಿನ ಮೇದಕ್, ಕೋನಪೂರ್, ದುಗ್ಗನೂರು, ಸುಲೇಪೇಟೆ ಸೇರಿದಂತೆ ಹಲವೆಡೆ ರಸ್ತೆ ಮಧ್ಯದಲ್ಲೇ ವಿವಿಧ ಮೂರ್ತಿಗಳು ಇದ್ದರೂ ಅವುಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆದರೆ ಭೊಂದೇಮಪಳ್ಳಿ ಗ್ರಾಮದ ಅಂಬೇಡ್ಕರ್ ಮೂರ್ತಿ ವಿಷಯ ಮಾತ್ರ ಸಚಿವರಿಗೆ ಕಾಣಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಭೀಮು ಮುಧೋಳ, ವಿಶ್ವನಾಥ್ ಉಡಗಿ, ಜಗು ಇಮಾಡಪೂರ, ಲಾಲಪ್ಪ, ವೇಂಕಟಪ್ಪ, ನರಶೀಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.







