ಶಾಸಕರ ಸಮಸ್ಯೆಯನ್ನು ಹಿರಿಯ ನಾಯಕರು ಸರಿಪಡಿಸಲಿದ್ದಾರೆ : ಸಚಿವ ಡಾ.ಎಂ.ಸಿ.ಸುಧಾಕರ್

ಡಾ.ಎಂ.ಸಿ.ಸುಧಾಕರ್
ಕಲಬುರಗಿ: ಆಳಂದ ಶಾಸಕ ಬಿ.ಆರ್ ಪಾಟೀಲ್ ಹಾಗೂ ರಾಜು ಕಾಗೆ ಅವರು ನಮ್ಮ ಪಕ್ಷದ ಹಿರಿಯ ಶಾಸಕರು, ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಬಿ.ಆರ್.ಪಾಟೀಲ್ ಅವರನ್ನು ಕರೆದಿದ್ದಾರೆ. ಅವರ ಸಮಸ್ಯೆ ಸಿಎಂ ಬಗೆಹರಿಸುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಮಾತನಾಡಿದ ಅವರು, ಪಕ್ಷದಲ್ಲಿ ಅನೇಕ ಹಿರಿಯರಿದ್ದಾರೆ. ಸಮಸ್ಯೆ ಬಗ್ಗೆ ಏನೇ ಇದ್ದರೂ ಅದನ್ನು ಚರ್ಚೆ ಮಾಡಿ ಬಗೆಹರಿಸುತ್ತಾರೆ. ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಹಿರಿಯರು ಸರಿಪಡಿಸಲಿದ್ದಾರೆ ಎಂದ ಅವರು, ಹಿಂದೆ ಬಿಜೆಪಿ ಇದ್ದಾಗ ಸಮಸ್ಯೆಗಳಿಗೆ ಬೆಲೆ ಕೊಡುತ್ತಿರಲಿಲ್ಲ. ನಮ್ಮಲ್ಲಿ ಶಾಸಕರ ಸಮಸ್ಯೆಗಳಿಗೆ ಬೆಲೆ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ಇನ್ನೂ, ನನ್ನ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಅವರ ಆಡಿಯೋದಲ್ಲಿ ಯಾರೋ ಅಧಿಕಾರಿಗಳು ತಪ್ಪು ಮಾಡಿದ್ದಾರೆಂದು ಇದೆ. ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಇಲಾಖೆ ತಿಳಿಸಿದೆ. ಶಾಸಕ ಗೋಪಾಲಕೃಷ್ಣ ಅವರು, ಸಚಿವ ಝಮೀರ್ ಅವರ ರಾಜೀನಾಮೆ ಕೇಳಿದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಬಿ.ಈಡಿ ಪರೀಕ್ಷೆ ಅಕ್ರಮ ಸಿಐಡಿಗೆ ವಹಿಸಲು ರಾಜ್ಯಪಾಲರಿಗೆ ಶಿಫಾರಸು:
ಗುಲ್ಬಾರ್ಗ ವಿವಿಯಲ್ಲಿ ನಡೆದಿದೆ ಎನ್ನಲಾದ ಬಿ.ಈಡಿ ಪರೀಕ್ಷೆ ಅಂಕಗಳ ತಿದ್ದುಪಡಿ ಹಾಗೂ ಅಕ್ರಮವನ್ನು ಸಿಐಡಿಗೆ ವಹಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ವಿವಿಗಳಲ್ಲಿ ನಡೆಯುವ ಪರೀಕ್ಷೆಗಳನ್ನು ನಡೆಸಲು ಅಲ್ಲಿನ ಸಿಬ್ಬಂದಿ, ಮುಖ್ಯಸ್ಥರೇ ಹೊಣೆಯಾಗಿರುತ್ತಾರೆ. ಆದರೂ ಗುಲ್ಬಾರ್ಗ, ರಾಯಚೂರು ಮತ್ತು ಶಿವಮೊಗ್ಗ ವಿವಿಗಳಲ್ಲಿ ಅಕ್ರಮಗಳು ನಡೆಯುತ್ತಿರುವುದು ಬಯಲಿಗೆ ಬಂದಿವೆ. ಇವುಗಳ ಕುರಿತಾಗಿ ಈಗಾಗಲೇ ಪ್ರಾಥಮಿಕ ವರದಿಯನ್ನು ತರಿಸಿಕೊಳ್ಳುತ್ತಿದ್ದೇವೆ, ಮುಂದಿನ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಿದ್ದೇವೆ ಎಂದರು.







