ಅ. 30ರಿಂದ ಕಲಬುರಗಿಯಲ್ಲಿ ಎಸ್‌ಎಫ್‌ಐ ರಾಜ್ಯ ಸಮ್ಮೇಳನ

ಕಲಬುರಗಿ: ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಸಮ್ಮೇಳನವು ಇದೇ ಅಕ್ಟೋಬರ್ 30, 31 ಹಾಗೂ ನವೆಂಬರ್ 1ರಂದು ಇಲ್ಲಿನ ಕರುಣೇಶ್ವರ ನಗರದಲ್ಲಿರುವ ಕೆಪಿಟಿಸಿಎಲ್ ಭವನದಲ್ಲಿ ನಡೆಯಲಿದೆ ಎಂದು ಎಸ್‌ಎಫ್‌ಐ ಗೌರವಾಧ್ಯಕ್ಷ ಆರ್.ಕೆ. ಹುಡಗಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನವನ್ನು ರಾಷ್ಟ್ರೀಯ ನಾಯಕಿ ಐಯಿಷಿ ಘೋಷ್ ಅವರು ಉದ್ಘಾಟಿಸಲಿದ್ದು, ಪ್ರಗತಿಪರ ಚಿತ್ರನಟ ಕಿಶೋರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣವನ್ನು ತಡೆದು ಸರ್ಕಾರಿ ಶಾಲಾ-ಕಾಲೇಜುಗಳನ್ನು ಬಲಪಡಿಸಬೇಕು. ವಿದ್ಯಾರ್ಥಿ ಸಂಘಟನೆಗಳನ್ನು ಒಳಗೊಂಡಂತೆ ಪ್ರಜಾಸತ್ತಾತ್ಮಕವಾಗಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಗಣೇಶ ರಾಥೋಡ್ ಮಾತನಾಡಿ, ಸರ್ಕಾರಿ ಶಾಲಾ-ಕಾಲೇಜುಗಳಿಗೆ ಅಗತ್ಯ ಅನುದಾನ, ಮೂಲಸೌಕರ್ಯ ಹಾಗೂ ಶಿಕ್ಷಕರನ್ನು ಒದಗಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಕೋಮು ಸೌಹಾರ್ದತೆ ಕಾಪಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಸಂವಿಧಾನದ 371(ಜೆ) ವಿಧಿಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಮೀಸಲಿಡುವುದರ ಜತೆಗೆ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸಿ, ಉದ್ಯೋಗ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಚಿಂತಕಿ ಮೀನಾಕ್ಷಿ ಬಾಳಿ, ಶಿವಪ್ಪ ಎನ್. ಅಂಬ್ಲಿಕಲ್, ಡಾ. ದೊಡ್ಡ ಬಸವರಾಜ್, ಜಿಲ್ಲಾ ಅಧ್ಯಕ್ಷೆ ಸುಜಾತಾ, ಜಿಲ್ಲಾ ಕಾರ್ಯದರ್ಶಿ ಇಮಾಮ್ ನದಾಫ್, ಸರ್ವೇಶ್, ಪ್ರದೀಪ್ ಮ್ಯಾಗಡಿ, ಬೃಂದಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.






