ಶಹಾಬಾದ್ | ಸೋನಂ ವಾಂಗ್ಚುಕ್ ಅವರನ್ನು ಬೆಂಬಲಿಸಿ ಎಐಡಿಎಸ್‌ಒ ಪ್ರತಿಭಟನೆ

ಶಹಾಬಾದ್: ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಸೇರಿದಂತೆ ಪ್ರತಿಭಟನಾಕಾರರನ್ನು ಬಲವಂತವಾಗಿ ತೆರವುಗೊಳಿಸಿರುವ ಕ್ರಮವನ್ನು ಖಂಡಿಸಿ ಹಾಗೂ ನೀಟ್ ಪರೀಕ್ಷೆ ಅಕ್ರಮಗಳ ವಿರುದ್ಧ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ನಗರದ ಜೇವರ್ಗಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನೀಟ್-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ, ಉಪವಾಸ ನಿರತ ಸೋನಂ ವಾಂಗ್ಚುಕ್ ಅವರೊಂದಿಗೆ ಕೇಂದ್ರ ಸರ್ಕಾರ ಪ್ರಜಾತಾಂತ್ರಿಕ ಸಂವಾದ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ಎಐಡಿಎಸ್‌ಒ ಜಿಲ್ಲಾ ಕೌನ್ಸಿಲ್ ಖಜಾಂಚಿ ಸ್ಪೂರ್ತಿ ಗುರುಜಳಕರ್ ಮಾತನಾಡಿ, ವೈದ್ಯಕೀಯ ಪ್ರವೇಶಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡುತ್ತಿದ್ದರೂ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪಾರದರ್ಶಕತೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಪರೀಕ್ಷಾ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕೌನ್ಸಿಲ್ ಉಪಾಧ್ಯಕ್ಷೆ ಪ್ರೀತಿ ದೊಡ್ಡಮನಿ ಮಾತನಾಡಿ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಿಂದ ಪ್ರಾಮಾಣಿಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಿದೆ. ವಿದ್ಯಾರ್ಥಿಗಳ ಆತಂಕ ನಿವಾರಣೆಗೆ ಸರ್ಕಾರ ವಿಶ್ವಾಸಾರ್ಹ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಳೆದ ಕೆಲವು ವರ್ಷಗಳಲ್ಲಿ ಎನ್‌ಟಿಎ ನಡೆಸಿದ ಪರೀಕ್ಷೆಗಳಲ್ಲಿ ಅಕ್ರಮಗಳು ಮರುಕಳಿಸುತ್ತಿವೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ಸೋನಂ ವಾಂಗ್ಚುಕ್ ಸೇರಿದಂತೆ ಉಪವಾಸ ನಿರತ ಹೋರಾಟಗಾರರೊಂದಿಗೆ ಸರ್ಕಾರ ತಕ್ಷಣ ಸಂವಾದ ನಡೆಸಿ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‍ಓ ಜಿಲ್ಲಾ ಕೌನ್ಸಿಲ್ ಸದಸ್ಯರಾದ ದೇವರಾಜ್, ಬಾಬು ಪವಾರ್, ಸೃಷ್ಟಿ, ಚೇತನ ಹಾಗೂ ವಿದ್ಯಾರ್ಥಿಗಳಾದ ಶ್ರೀಶೈಲ್, ಪವನ್, ಶಿವಾನಂದ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.






