ಶಹಾಬಾದ್ | ಗೋಳಾ(ಕೆ) ಗ್ರಾಮದಲ್ಲಿ ಕಳಪೆ ರಸ್ತೆ ಕಾಮಗಾರಿ ಆರೋಪ : ಕ್ರಮಕ್ಕೆ ಒತ್ತಾಯ

ಶಹಾಬಾದ್ : ತಾಲೂಕಿನ ಗೋಳಾ(ಕೆ) ಗ್ರಾಮದಲ್ಲಿ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿ ಅತ್ಯಂತ ಕಳಪೆ ಮಟ್ಟದಲ್ಲಿ ನಡೆಯುತ್ತಿದ್ದು, ತಕ್ಷಣವೇ ಕಾಮಗಾರಿ ಸ್ಥಗಿತಗೊಳಿಸಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಬೇಕೆಂದು ಕರವೇ ತಾಲೂಕಾಧ್ಯಕ್ಷ (ನಾರಾಯಣಗೌಡ ಬಣ) ಯಲ್ಲಾಲಿಂಗ ಹೈಯ್ಯಳಕರ್ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹಗಲಿನಲ್ಲಿ ನಡೆಯಬೇಕಾದ ಕಾಮಗಾರಿಯನ್ನು ರಾತ್ರಿ ವೇಳೆ ಯಾರೂ ಇಲ್ಲದ ಸಮಯದಲ್ಲಿ ನಡೆಸಲಾಗುತ್ತಿದೆ. ಇದು ಇಲಾಖೆಯ ನಿಯಮ ಉಲ್ಲಂಘನೆಯಾಗಿದ್ದು, ರಸ್ತೆ ನಿರ್ಮಾಣದಲ್ಲಿ ಸಿಮೆಂಟ್ ಪ್ರಮಾಣ ಕಡಿಮೆ ಬಳಕೆ ಮಾಡಿರುವುದರಿಂದ ರಸ್ತೆಯ ಅಂಚುಗಳಲ್ಲಿ ಕೈಯಲ್ಲೇ ಕಂಕರ್ ಹೊರಬರುತ್ತಿದೆ ಎಂದು ಆರೋಪಿಸಿದರು.
ತಾಂತ್ರಿಕ ಮಾನದಂಡಗಳನ್ನು ಪಾಲಿಸದೇ ಕಾಮಗಾರಿ ನಡೆಸಲಾಗುತ್ತಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಪರಿಶೀಲನೆ ನಡೆಸಬೇಕಾದ ಅಧಿಕಾರಿಗಳು ಗೈರಾಗಿದ್ದಾರೆ. ಸಂಬಂಧಪಟ್ಟ ಜೆಇಗೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ರೀತಿಯ ಕಳಪೆ ಕಾಮಗಾರಿಯಿಂದ ಸರ್ಕಾರದ ಹಣ ವ್ಯರ್ಥವಾಗುತ್ತಿದೆ. ಆದ್ದರಿಂದ ತಕ್ಷಣ ಕಾಮಗಾರಿ ನಿಲ್ಲಿಸಿ ತಾಂತ್ರಿಕ ಪರಿಶೀಲನೆ ನಡೆಸಬೇಕು. ಸಂಬಂಧಪಟ್ಟ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಈ ಕುರಿತು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.







