ಶಹಾಬಾದ್ : ಎಸ್‌ಐಆರ್ ರದ್ದು, ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

ಶಹಾಬಾದ್: ದಿಲ್ಲಿಯಲ್ಲಿ ನಡೆಯುತ್ತಿರುವ ಎಸ್‌ಐಆರ್ ವಿರೋಧಿ ಹೋರಾಟಕ್ಕೆ ಜನಪರ ಸಂಘಟನೆಗಳ ಒಕ್ಕೂಟ ಸಂಪೂರ್ಣ ಬೆಂಬಲ ನೀಡುತ್ತದೆ. ಮತದಾರರ ಹಕ್ಕುಗಳ ರಕ್ಷಣೆಗಾಗಿ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ದಸಂಸ) ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಆಗ್ರಹಿಸಿದರು.
ನಗರದ ರೈಲ್ವೆ ನಿಲ್ದಾಣದ ಸಮೀಪ ಶನಿವಾರ ಸಂಜೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರತಿ ಚುನಾವಣೆಯ ಸಂದರ್ಭದಲ್ಲೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಪರಿಶೀಲನೆ ನಡೆಯುವುದು ಸಾಮಾನ್ಯ. ಆದರೆ ಈ ಬಾರಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ಹಿಂದಿನ ಉದ್ದೇಶದ ಬಗ್ಗೆ ಅನುಮಾನಗಳು ಮೂಡಿವೆ. ಬಿಜೆಪಿ ಸರಕಾರದ ಆಡಳಿತದಲ್ಲಿ ಪ್ರಶ್ನಿಸುವ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಕೋಟ್ಯಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿಸುವ ಆತಂಕ ಎದುರಾಗಿದೆ ಎಂದು ಆರೋಪಿಸಿದರು.
ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಆಶಯವಾಗಿದ್ದು, ಅದನ್ನು ರಕ್ಷಿಸಲು ಜನಸಾಮಾನ್ಯರು ಒಗ್ಗಟ್ಟಿನಿಂದ ಹೋರಾಡಬೇಕು. ಎಸ್‌ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ವಜಾಗೊಳಿಸಬೇಕು ಹಾಗೂ ದಿಲ್ಲಿಯ ಪ್ರತಿಭಟನೆಯಲ್ಲಿ ಬಂಧಿತರಾಗಿರುವ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಗಣಪತರಾವ್ ಕೆ., ರಾಘವೇಂದ್ರ ಎಂ.ಜಿ., ಮಾನೆ, ನಾಗಪ್ಪ ರೈಚೂರಕರ್ ಹಾಗೂ ಗುಂಡಮ್ಮ ಮಡಿವಾಳ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಡಾ. ಎಂ.ಎಂ. ರಶೀದ್, ಗಣಪತರಾವ್ ಕೆ., ರಾಘವೇಂದ್ರ ಎಂ.ಜಿ., ಮಾನೆ, ನಾಗಪ್ಪ ರೈಚೂರಕರ್, ಗುಂಡಮ್ಮ ಮಡಿವಾಳ, ಮಲ್ಲಿಕಾರ್ಜುನಗೌಡ ಹಳ್ಳಿ, ಹಾಸಮ್ ಖಾನ್, ಮರಿಯಪ್ಪ ಮೇತ್ರೆ, ಫಜಲ್ ಪಟೇಲ್, ನರಸಿಂಲು ರೈಚೂರಕರ್, ಮಲ್ಲಿಕಾರ್ಜುನ ಹಳ್ಳಿ ಹಾಗೂ ಮಹಮ್ಮದ್ ಮಸ್ತಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಪರಶುರಾಮ ವನಂಜಕರ, ಪಿಎಸ್‌ಐ ಚಂದ್ರಕಾಂತ ಮೇಕಾಲೆ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.






