ಶಹಾಬಾದ್ | ವಿದ್ಯುತ್ ತಂತಿ ತಗುಲಿ ಕಟ್ಟಡ ಕಾರ್ಮಿಕ ಸ್ಥಳದಲ್ಲೇ ಸಾವು

ಶಹಾಬಾದ್: ತಾಲೂಕಿನ ಭಂಕೂರ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ವಿದ್ಯುತ್ ತಂತಿ ತಗುಲಿ 32 ವರ್ಷದ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಶಹಾಬಾದ್ ನಗರದ ಲಕ್ಷ್ಮಿಗಂಜ್ ನಿವಾಸಿ ಶೇಕ್ ವಸೀಮ್ ಶೇಕ್ ಬಾಬು (32) ಮೃತಪಟ್ಟವರು. ಭಂಕೂರ ಕೈಗಾರಿಕಾ ಪ್ರದೇಶದಲ್ಲಿ ಚಂದ್ರಶೇಖರ್ ನಾಯಕ್ ಅವರಿಗೆ ಸೇರಿದ ಕೈಗಾರಿಕಾ ಕಟ್ಟಡದ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ವೇಳೆ, ಜೆಸ್ಕಾಂನ ಒಂದು ಕಂಬದಿಂದ ಮತ್ತೊಂದು ಕಂಬಕ್ಕೆ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿ ಆಕಸ್ಮಿಕವಾಗಿ ತಗುಲಿ ಮೃತಪಟ್ಟಿದ್ದಾರೆ.
ಘಟನೆಯಿಂದ ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಮೃತರ ಸಂಬಂಧಿಕರು ಶಹಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story




