ಶಹಾಬಾದ್ | ಹೊನಗುಂಟಾ ಗ್ರಾಮದ ಗ್ರಾಮಲೇಖಪಾಲಕರನ್ನು ವರ್ಗಾವಣೆ ಮಾಡಲು ಒತ್ತಾಯ

ಶಹಾಬಾದ್ : ತಾಲೂಕಿನ ಹೊನಗುಂಟಾ ಗ್ರಾಮದ ಗ್ರಾಮಲೇಖಪಾಲಕ ಗಣಮಂತರಾವ ಪಾಟೀಲ ಅವರು ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಕರ್ತವ್ಯ ನಿರ್ವಹಿಸುತ್ತಿದ್ದು, ತಮಗೆ ಬೇಕಾದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ತಾಲೂಕಿನಿಂದ ವರ್ಗಾವಣೆ ಮಾಡಬೇಕೆಂದು ಕರವೇ (ಪ್ರವೀಣಶೆಟ್ಟಿ ಬಣ) ತಾಲೂಕಾಧ್ಯಕ್ಷ ವಿಶ್ವರಾಜ ಫಿರೋಜಾಬಾದ ತಹಸೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ, ಗ್ರಾಮದಲ್ಲಿ ರೈತರಿಗೆ ಸರಿಯಾದ ಮಾಹಿತಿ ನೀಡದೇ ಹಾಗೂ ಆಸ್ತಿ ವರ್ಗಾವಣೆಯ ಸಂದರ್ಭಗಳಲ್ಲಿ ಕಾನೂನು ಬಾಹಿರವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಆಸ್ತಿ ವರ್ಗಾವಣೆಗೆ ಗ್ರಾಮದಲ್ಲಿನ ನಾಲ್ಕು ಪಂಚರ ಸಾಕ್ಷಿ ಅಗತ್ಯವಿದ್ದರೂ, ಬೇರೆ ಊರಿನವರ ಸಾಕ್ಷಿ ಪಡೆದು ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ಜೊತೆಗೆ ಸಂಬಂಧಪಟ್ಟವರಿಗೆ ಸೂಕ್ತ ಮಾಹಿತಿ ನೀಡದೆ ಹಣದ ಆಸೆಗಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಲಾಗಿದೆ.
ಇದೇ ವೇಳೆ, 2024-25 ಮತ್ತು 2025-26ರಲ್ಲಿ ಉಂಟಾದ ಪ್ರವಾಹದಿಂದ ಗ್ರಾಮದಲ್ಲಿ ಮನೆಗಳು ಮತ್ತು ಬೆಳೆಗಳಿಗೆ ಭಾರಿ ಹಾನಿಯಾಗಿದ್ದರೂ, ನಿಜವಾಗಿ ಹಾನಿಗೊಳಗಾದವರಿಗೆ ಪರಿಹಾರ ನೀಡದೇ, ಹಾನಿಯೇ ಆಗದ ಕೆಲವರಿಗೆ ಪರಿಹಾರ ಒದಗಿಸಿರುವ ಆರೋಪವೂ ಕೇಳಿಬಂದಿದೆ.
ಗಂಡ ಮೃತಪಟ್ಟ ನಂತರ ಆಸ್ತಿ ಹೆಂಡತಿಗೆ ವರ್ಗಾವಣೆ ಮಾಡಬೇಕಾದಲ್ಲಿ ಇತರರಿಗೆ ವರ್ಗಾವಣೆ ಮಾಡಿರುವುದು ಕೂಡ ಗಂಭೀರ ನಿರ್ಲಕ್ಷ್ಯಕ್ಕೆ ಉದಾಹರಣೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಷಯವನ್ನು ತಹಶೀಲ್ದಾರ್ ನೀಲಪ್ರಭ ಬಬಲಾದ ಅವರ ಗಮನಕ್ಕೂ ತರಲಾಗಿದೆ ಎಂದು ತಿಳಿಸಲಾಗಿದೆ.
ಆದ್ದರಿಂದ ಸಂಬಂಧಪಟ್ಟ ಗ್ರಾಮಲೇಖಪಾಲಕನ ವಿರುದ್ಧ ತಕ್ಷಣ ಕ್ರಮ ಕೈಗೊಂಡು ವರ್ಗಾವಣೆ ಮಾಡಬೇಕು. ಇಲ್ಲವಾದರೆ ತಹಶೀಲ್ದಾರ್ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ಕರವೇ ಮುಖಂಡರು ಎಚ್ಚರಿಸಿದ್ದಾರೆ.
ಕರವೇ ಉಪಾಧ್ಯಕ್ಷ ಲಿಂಗರಾಜ ಕಮರಡಗಿ, ಶರಣು ತಳವಾರ, ದತ್ತು ಹೀರಾಪೂರ, ಪ್ರಭು ಮಂಗಳೂರ, ಭೂತಾಳ ಪೂಜಾರಿ ಇತರರು ಇದ್ದರು.







