ಶಹಾಬಾದ್ | ರೈಲು ಹಳಿ ದಾಟಲು ಸಂಕಷ್ಟ: ಮೇಲ್ಸೇತುವೆ ನಿರ್ಮಾಣಕ್ಕೆ ಯಲ್ಲಾಲಿಂಗ ಹೈಯ್ಯಳಕರ್ ಆಗ್ರಹ

ಶಹಾಬಾದ್: ನಗರಸಭೆ ವ್ಯಾಪ್ತಿಯ ಕೊಳಸಾ ಫೈಲ್, ದಕ್ಕಾ ತಾಂಡಾ, ಚುನ್ನಾ ಭಟ್ಟಿ, ಬಂಜಾರಾ ನಗರ, ಸಿದ್ಧಾರ್ಥ ನಗರ, ಬಾರಿ ನಗರ ಹಾಗೂ ರಾಂಭೋಫೈಲ್ ಬಡಾವಣೆಯ ನಿವಾಸಿಗಳು ದಿನನಿತ್ಯ ರೈಲು ಹಳಿಯನ್ನು ದಾಟಿ ಸಂಚರಿಸಲು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಇಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಅಥವಾ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಕರವೇ ತಾಲೂಕು ಅಧ್ಯಕ್ಷ ಯಲ್ಲಾಲಿಂಗ ಹೈಯ್ಯಳಕರ್ ಆಗ್ರಹಿಸಿದ್ದಾರೆ.
ಈ ಬಡಾವಣೆಗಳಲ್ಲಿ ಹಿರಿಯರು ಹಾಗೂ ಮಕ್ಕಳು ಸೇರಿ ಸಾವಿರಾರು ಜನರು ವಾಸಿಸುತ್ತಿದ್ದರೂ ಇಲ್ಲಿಯವರೆಗೆ ಯಾವುದೇ ಮೂಲ ಸೌಲಭ್ಯ ಕಲ್ಪಿಸಲಾಗಿಲ್ಲ. ರೈಲ್ವೆ ಮೇಲ್ಸೇತುವೆ ಇಲ್ಲದ ಕಾರಣ ಸ್ಥಳೀಯರು ಹಾಗೂ ಶಾಲೆಗೆ ಹೋಗುವ ನೂರಾರು ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ರೈಲು ಹಳಿ ದಾಟಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಇಲ್ಲಿಂದ ನಗರಕ್ಕೆ ವಾಹನ ಸಂಚಾರಕ್ಕೂ ಸರಿಯಾದ ವ್ಯವಸ್ಥೆ ಇಲ್ಲ. ತುರ್ತು ಸಂದರ್ಭಗಳಲ್ಲಿ ಗರ್ಭಿಣಿಯರು, ರೋಗಿಗಳು ಹಾಗೂ ವೃದ್ಧರಿಗೆ ಭಾರೀ ತೊಂದರೆ ಉಂಟಾಗುತ್ತಿದೆ ಎಂದು ಅವರು ತಿಳಿಸಿದರು.
ಶಾಲೆಗೆ ತೆರಳಿದ ಮಕ್ಕಳು ಸುರಕ್ಷಿತವಾಗಿ ಮನೆಗೆ ಮರಳುವವರೆಗೂ ಪೋಷಕರು ಆತಂಕದಲ್ಲೇ ಕಾಲ ಕಳೆಯಬೇಕಾಗಿದೆ. ಈ ಸಮಸ್ಯೆ ಪರಿಹರಿಸಲು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಆದ್ದರಿಂದ ತಕ್ಷಣ ರೈಲು ಹಳಿ ದಾಟುವ ಸಮಸ್ಯೆಯನ್ನು ತಪ್ಪಿಸಲು ಮೇಲ್ಸೇತುವೆ ನಿರ್ಮಿಸಿ ಸ್ಥಳೀಯರ ಜೀವ ಭದ್ರತೆ ಕಾಪಾಡುವಂತೆ ರೈಲ್ವೆ ಅಧಿಕಾರಿಗಳಿಗೆ ಅವರು ಆಗ್ರಹಿಸಿದರು.







