Shahabad | ರಿಯಾಯಿತಿ ದರದಲ್ಲಿ ಜೋಳ, ಕಡಲೆ ಬೀಜ ವಿತರಣೆ : ಸುಷ್ಮಾ ಕಲಕೇರಿ

ಶಹಾಬಾದ್: ನಗರದ ರೈತ ಸಂಪರ್ಕ ಕೇಂದ್ರದಿಂದ ತಾಲೂಕಿನ ರೈತರಿಗೆ ಹಿಂಗಾರು ಬಿತ್ತನೆಗಾಗಿ ರಿಯಾಯಿತಿ ದರದಲ್ಲಿ ಜೋಳ ಹಾಗೂ ಕಡಲೆ ಬೀಜಗಳನ್ನು ವಿತರಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಸುಷ್ಮಾ ಕಲಕೇರಿ ಹೇಳಿದರು.
ಮಂಗಳವಾರ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಜೋಳ ಹಾಗೂ ಕಡಲೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತ ಸಂಪರ್ಕ ಕೇಂದ್ರದಲ್ಲಿ 5 ಕ್ವಿಂಟಲ್ ಜೋಳ ಹಾಗೂ 100 ಕ್ವಿಂಟಲ್ ಕಡಲೆ ಬೀಜಗಳ ದಾಸ್ತಾನು ಇದೆ. ಸಾಮಾನ್ಯ ರೈತರು 20 ಕೆ.ಜಿ. ಕಡಲೆ ಬೀಜಕ್ಕೆ 1,300 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು 1,000 ರೂ. ಪಾವತಿಸಿ ಖರೀದಿಸಬಹುದು. ಜೋಳದ ಪ್ರತಿ 3 ಕೆ.ಜಿ. ಪ್ಯಾಕೆಟ್‌ಗೆ ಸಾಮಾನ್ಯ ರೈತರು 156 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು 90 ರೂ. ಪಾವತಿಸಿ ಖರೀದಿಸಬಹುದಾಗಿದೆ ಎಂದು ತಿಳಿಸಿದರು.
ಬಿತ್ತನೆ ಬೀಜಗಳ ಅಗತ್ಯ ಪ್ರಮಾಣದ ದಾಸ್ತಾನು ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆದುಕೊಂಡು ಬೀಜಗಳನ್ನು ಖರೀದಿಸಿ ಹಿಂಗಾರು ಬಿತ್ತನೆ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಕೃಷಿ ಸಮಾಜದ ಅಧ್ಯಕ್ಷ ಶರಣಗೌಡ ಪೊಲೀಸ್ ಪಾಟೀಲ (ಗೋಳಾ ಕೆ.) ಅವರು ರೈತರಿಗೆ ಜೋಳ ಹಾಗೂ ಕಡಲೆ ಬೀಜಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಹಾಗೂ ರೈತರು ಉಪಸ್ಥಿತರಿದ್ದರು.




