ಶಹಾಬಾದ್ | ಮಳೆ ಕೊರತೆ : ರೈತರ ಸಂಕಷ್ಟ ನಿವಾರಣೆಗೆ ರಾವೂರಿನಲ್ಲಿ ಮುಸ್ಲಿಂ ಸಮಾಜದಿಂದ ವಿಶೇಷ ಪ್ರಾರ್ಥನೆ

ಶಹಾಬಾದ್: ಮಳೆ ಕೊರತೆಯಿಂದ ರೈತರು ಹಾಗೂ ಜನರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಿ ಜಲಮೂಲಗಳು ತುಂಬಿ ರೈತರ ಬದುಕು ಹಸನಾಗಲಿ ಎಂದು ಆಶಿಸಿ ಶಹಾಬಾದ್ ತಾಲೂಕಿನ ರಾವೂರ ಗ್ರಾಮದಲ್ಲಿ ಮುಸ್ಲಿಂ ಸಮಾಜದ ವತಿಯಿಂದ ರವಿವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಗ್ರಾಮದ ಹೊರವಲಯದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆದ ಪ್ರಾರ್ಥನಾ ಕಾರ್ಯಕ್ರಮವು ಮೌಲಾನಾ ಕೈಸರ್ ಸಾಬ್ ರಷದಿ ಅವರ ಸಮ್ಮುಖದಲ್ಲಿ ನಡೆಯಿತು. ರಾವೂರ ಗ್ರಾಮದ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರು ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿದರು.
ಮಳೆಯ ಕೊರತೆಯಿಂದ ಜನರು ಜೀವನೋಪಾಯಕ್ಕಾಗಿ ಬೇರೆ ಪ್ರದೇಶಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಳ್ಳ, ನದಿಗಳು ಹಾಗೂ ಜಲಮೂಲಗಳಲ್ಲಿ ನೀರಿನ ಕೊರತೆಯಿಂದ ಜಾನುವಾರುಗಳು, ಪ್ರಾಣಿ-ಪಕ್ಷಿಗಳು ಸೇರಿದಂತೆ ಮೂಕ ಜೀವಿಗಳೂ ಸಂಕಷ್ಟ ಅನುಭವಿಸುತ್ತಿವೆ. ಅವುಗಳ ಮೇಲೂ ಕರುಣೆ ತೋರಿ ಉತ್ತಮ ಮಳೆ ಸುರಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೌಲಾನಾ ಕೈಸರ್ ಸಾಬ್ ರಷದಿ, “ಭಗವಂತನಲ್ಲಿ ಸಂಪೂರ್ಣ ವಿಶ್ವಾಸವಿಟ್ಟು ಮಳೆಗಾಗಿ ಪ್ರಾರ್ಥಿಸಿದ್ದೇವೆ. ಪ್ರವಾದಿ ಮೊಹಮ್ಮದ್ ಅವರನ್ನು ಸ್ಮರಿಸಿಕೊಂಡು ವಿಶೇಷ ದುಆ ಸಲ್ಲಿಸಿದ್ದೇವೆ. ಅಲ್ಲಾಹ ಖಂಡಿತವಾಗಿಯೂ ಮಳೆ ಕರುಣಿಸಿ ಹಳ್ಳ-ನದಿಗಳನ್ನು ತುಂಬಿಸಿ ರೈತರಿಗೆ ನೆರವಾಗುತ್ತಾನೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು.
ಪ್ರಾರ್ಥನಾ ಕಾರ್ಯಕ್ರಮದಲ್ಲಿ ಅಬ್ದುಲ್ ಅಝೀಝ್ ಸೀಠ್, ಮೌಲಾನಾ ಹಾಜಿ ಕರೀಂ, ಮೌಲಾನಾ ರೌಫ್, ಮೌಲಾನಾ ತೌಸಿಫ್, ಚೋಟುಮಿಯಾ ಆಡಿಕಿ, ಚಾಂದಪಾಷಾ ಪಿರಾವಾಲೆ, ಮಶಾಕ್ ಸೇಠ, ಯೂನುಸ್ ಪ್ಯಾರೇ, ಮೆಹಬೂಬ್ ಖಾನ್, ಅಮೀರ್ ಮೂಸವಾಲೆ, ಫಿರೋಜ್ ಮೌಜನ್, ಹಾಜಿ ಸಾಹೇಬ ಮಾಸುಲ್ದಾರ್, ಅಬ್ಜಲ್ ತುನ್ನೂರ್ ಸೇರಿದಂತೆ ರಾವೂರ ಗ್ರಾಮದ ಸಮಸ್ತ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.






