ಕಲಬುರಗಿ | ಆಳಂದದಲ್ಲಿ ಶಂಕರಾಚಾರ್ಯ ಜಯಂತಿ ಆಚರಣೆ

ಕಲಬುರಗಿ : ಶಂಕರಾಚಾರ್ಯರು ಸ್ಥಾಪಿಸಿದ ಚತುರಾಮ್ನಾಯ ಪೀಠಗಳ ಕೊಡುಗೆಯನ್ನು ಸ್ಮರಿಸುವ ಶಂಕರಾಚಾರ್ಯ ಜಯಂತಿಯನ್ನು ಪಟ್ಟಣದ ಆಳಂದ ತಾಲೂಕು ಆಡಳಿತದ ಆಶ್ರಯದಲ್ಲಿ ಗೌರವಪೂರ್ವಕವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಆಳಂದ ತಾಲೂಕಿನ ಅಧಿಕಾರಿಗಳು, ಸಮಾಜದ ಮುಖಂಡರು ಹಾಗೂ ತಾಲೂಕು ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಜಗದ್ಗುರು ಶಂಕರಾಚಾರ್ಯರು ಬಾಲ್ಯದಲ್ಲಿ ಗುರು ಗೋವಿಂದ ಭಗವತ್ಪಾದರಿಂದ ವೇದ, ಉಪನಿಷತ್ ಮತ್ತು ಯೋಗ ವಿದ್ಯೆಯನ್ನು ಕರಗತ ಮಾಡಿಕೊಂಡು ಕಾಶಿಯಲ್ಲಿ ಶಿಷ್ಯರಿಗೆ ಉಪದೇಶ ನೀಡಿದ್ದರು. ಅವರು ರಚಿಸಿದ ಸ್ತೋತ್ರಗಳು, ಅಷ್ಟಕಗಳು ಇಂದಿಗೂ ಪ್ರಸಿದ್ಧವಾಗಿದ್ದು, ಧರ್ಮವನ್ನು ಸದೃಢಗೊಳಿಸುವಲ್ಲಿ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಅವರ ಕೊಡುಗೆ ಅನನ್ಯವಾದದ್ದು. ಧರ್ಮವೇ ನಿಜವಾದ ಆಯುಧ ಎಂದು ನಂಬಿದ ಶಂಕರಾಚಾರ್ಯರು, ದೇಶದ ನಾಲ್ಕು ದಿಕ್ಕುಗಳಲ್ಲಿ ಶೃಂಗೇರಿ, ದ್ವಾರಕಾ, ಪುರಿ ಮತ್ತು ಬದರಿಕಾಶ್ರಮದಲ್ಲಿ ಪೀಠಗಳನ್ನು ಸ್ಥಾಪಿಸಿ ತ್ಯಾಗಿ ಸನ್ಯಾಸಿ ಪರಂಪರೆಯನ್ನು ಆರಂಭಿಸಿದರು ಎಂದು ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ವಿಜಯಕುಮಾರ ಕೋಥಳಿಕರ್ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್ ಸಮಾಜ ಮುಖಂಡರೊಂದಿಗೆ ಪೂಜೆ ನೆರವೇರಿಸಿದರು.
ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಸಮಾಜ ಕಲ್ಯಾಣಾಧಿಕಾರಿ ವಿಜಯಲಕ್ಷ್ಮೀ ಹೋಳ್ಕರ್, ಸಮಾಜ ಕಾರ್ಯದರ್ಶಿ ಭಗವಾನ್ ಪೋತದಾರ, ಮಹಿಳಾ ಮಂಡಳದ ಅಧ್ಯಕ್ಷೆ ಅನುಪಮಾ ಕುಲಕರ್ಣಿ, ಪುರಸಭೆ ಮಾಜಿ ಅಧ್ಯಕ್ಷೆ ಮೇಘಾ ಕೋಥಳಿಕರ್, ಸದಸ್ಯೆ ಅಸ್ಮಿತಾ ಚಿಟ್ಟಗೂಪಕರ ಜೊತೆಗೆ ಸಮಾಜದ ಮುಖಂಡರಾದ ಮೋಹನ್‌ರಾವ್ ಕುಲಕರ್ಣಿ, ಸತೀಶ್ ಕುಲಕರ್ಣಿ, ಜಯವಂತ್ ಕುಲಕರ್ಣಿ, ಹಣಮಂತ್ ಕುಲಕರ್ಣಿ, ಗೀತಾ ಮುಜುಮದಾರ, ನಿರ್ಮಲಾ ಮಂಟಕಿಕರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಅದ್ವೈತ ತತ್ವ ಮತ್ತು ಧರ್ಮಕ್ಕಾಗಿ ಮಾಡಿದ ಕೊಡುಗೆಗಳನ್ನು ಸ್ಮರಿಸಲಾಯಿತು.







