ರಾಜ್ಯದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಶಿರಪೂರ ಮಾದರಿ ಯೋಜನೆ : ಸಚಿವ ಡಾ.ಅಜಯ್ ಸಿಂಗ್

ಕಲಬುರಗಿ: ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆ, ಏತ ನೀರಾವರಿ, ಬ್ರಿಡ್ಜ್ ಕಮ್ ಬ್ಯಾರೇಜ್, ಸರಣಿ ಚೆಕ್ ಡ್ಯಾಂ ಹಾಗೂ ಗೋಕಟ್ಟಾ ನಿರ್ಮಾಣ ಸೇರಿದಂತೆ ಮಹಾರಾಷ್ಟ್ರದ ಶಿರಪೂರ ಮಾದರಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಸಿಂಗ್ ಹೇಳಿದರು.
ನಗರದ ಕೆಕೆಆರ್‌ಡಿಬಿ ಮಂಡಳಿ ಸಭಾಂಗಣದಲ್ಲಿ ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕೈಗೊಳ್ಳುವ ಯೋಜನೆಗಳ ವಿವರ ಒಳಗೊಂಡ ಡ್ಯಾಶ್‌ಬೋರ್ಡ್‌ನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದು ಪ್ರತಿ ಕ್ಷೇತ್ರದಲ್ಲಿ ಅಗತ್ಯವಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
3,333 ಕೋಟಿ ರೂ. ಅನುದಾನ :
ಸಣ್ಣ ನೀರಾವರಿ ಇಲಾಖೆಗೆ 2026–27ನೇ ಸಾಲಿನಲ್ಲಿ 3,333 ಕೋಟಿ ರೂ. ಅನುದಾನ ನೀಡಲಾಗಿದೆ. ರಾಜ್ಯದ ಇಲಾಖೆಯ ಅಧೀನದಲ್ಲಿರುವ 3,810 ಕೆರೆಗಳ ಪೈಕಿ 925 ಕೆರೆಗಳನ್ನು ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
2024–25 ಮತ್ತು 2025–26ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ 9,829 ಹಾಗೂ ಗಿರಿಜನ ಉಪ ಯೋಜನೆಯಡಿ 6,165 ರೈತರಿಗೆ ಕೊಳವೆಬಾವಿ ಕೊರೆದು ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸಲಾಗಿದೆ. 687 ಬ್ಯಾರೇಜ್, ಚೆಕ್ ಡ್ಯಾಂ ಹಾಗೂ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ 40,316 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ 1,811 ಕೋಟಿ ರೂ. :
2026–27ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 1,811 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಎಂಟು ಏತ ನೀರಾವರಿ ಯೋಜನೆಗಳ ಮೂಲಕ ಸುಮಾರು 88 ಕೆರೆಗಳನ್ನು ತುಂಬಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಚಿವರು ಹೇಳಿದರು.
ಕಳೆದ ಸಾಲಿನಲ್ಲಿ ಕೆಕೆಆರ್‌ಡಿಬಿ ಹಾಗೂ ಸಣ್ಣ ನೀರಾವರಿ ಇಲಾಖೆ ತಲಾ ಶೇ.50ರಷ್ಟು ಅನುದಾನ ನೀಡುವ ಮೂಲಕ ಸುಮಾರು ₹200 ಕೋಟಿ ವೆಚ್ಚದಲ್ಲಿ ಶಿರಪೂರ ಮಾದರಿಯ ಸರಣಿ ಚೆಕ್ ಡ್ಯಾಂ ಹಾಗೂ ಕೆರೆ ಅಭಿವೃದ್ಧಿಯ 13 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದುವರೆಗೆ 10.65 ಕೋಟಿ ರೂ. ಖರ್ಚಾಗಿದೆ ಎಂದರು.
2026–27ನೇ ಸಾಲಿನಲ್ಲಿ ಕೆಕೆಆರ್‌ಡಿಬಿ, ಸಣ್ಣ ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ತಲಾ 75 ಕೋಟಿ ರೂ. ಸೇರಿದಂತೆ ಒಟ್ಟು 225 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಕರ್ನಾಟಕದ ಉಳಿದ 25 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತರ್ಜಲ ಹೆಚ್ಚಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
ಕಲಬುರಗಿಯಲ್ಲಿ 343 ಕೋಟಿ ರೂ. ವೆಚ್ಚದ ಯೋಜನೆಗಳು :
ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 343 ಕೋಟಿ ರೂ. ವೆಚ್ಚದಲ್ಲಿ ಮೂರು ಏತ ನೀರಾವರಿ ಯೋಜನೆಗಳ ಮೂಲಕ ಸುಮಾರು 19 ಕೆರೆಗಳನ್ನು ತುಂಬಿಸುವ ಕಾಮಗಾರಿಗಳು ಪ್ರಗತಿಯಲ್ಲಿವೆ.
ಸೇಡಂ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ 89.30 ಕೋಟಿ ರೂ. ವೆಚ್ಚದ ಬೀರನಳ್ಳಿ ಏತ ನೀರಾವರಿ ಯೋಜನೆ ಹಾಗೂ 82.50 ಕೋಟಿ ರೂ. ವೆಚ್ಚದ ಕಾಚೂರ ಸಮೀಪದ ಏತ ನೀರಾವರಿ ಯೋಜನೆಗಳು ಇದರಲ್ಲಿ ಸೇರಿವೆ.
ಕಲಬುರಗಿ ದಕ್ಷಿಣ ಕ್ಷೇತ್ರದ ಒಂಬತ್ತು ಕೆರೆಗಳಿಗೆ ಬೆಣ್ಣೆತೊರಾ ಜಲಾಶಯದ ಮೇಲ್ಭಾಗದಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವ 197.71 ಕೋಟಿ ರೂ. ಯೋಜನೆ ಹಾಗೂ ಚಿತ್ತಾಪುರ ತಾಲೂಕಿನ ಒಂಬತ್ತು ಕೆರೆಗಳನ್ನು ತುಂಬಿಸುವ 135 ಕೋಟಿ ರೂ. ಯೋಜನೆ ಪ್ರಗತಿಯಲ್ಲಿವೆ. ಜೇವರ್ಗಿ ತಾಲೂಕಿನ ಹರವಾಳದಲ್ಲಿ 130 ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಕೆಕೆಆರ್‌ಡಿಬಿಯಿಂದ 10 ಸಾವಿರ ಕೋಟಿ ರೂ. ಖರ್ಚು :
ಕೆಕೆಆರ್‌ಡಿಬಿ ಅಧ್ಯಕ್ಷರೂ ಆಗಿರುವ ಡಾ. ಅಜಯ್ ಸಿಂಗ್ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಮಂಡಳಿಯಿಂದ 10 ಸಾವಿರ ರೂ. ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗಿದೆ ಎಂದರು.
2023–24ರಲ್ಲಿ 2,009 ಕೋಟಿ ರೂ., 2024–25ರಲ್ಲಿ 3,358 ಕೋಟಿ ರೂ. ಹಾಗೂ 2025–26ರಲ್ಲಿ 4,137 ಕೋಟಿ ರೂ. ಖರ್ಚು ಮಾಡಲಾಗಿದೆ. 2026–27ನೇ ಸಾಲಿನ ಅಂತ್ಯದ ವೇಳೆಗೆ 5,000 ಕೋಟಿ ರೂ. ಖರ್ಚು ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸೈನ್ಸ್ ಸಿಟಿ ಸ್ಥಾಪನೆಗೆ ಚಿಂತನೆ :
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಪ್ಲಾನೆಟೋರಿಯಂ, ಸೈನ್ಸ್ ಸೆಂಟರ್ ಹಾಗೂ ಸೈನ್ಸ್ ಸಿಟಿ ಸ್ಥಾಪನೆಗೆ ಯೋಜನೆ ರೂಪಿಸಲಾಗುವುದು. ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಯೋಜನೆಗಳ ನೀಲನಕ್ಷೆ ಸಿದ್ಧಪಡಿಸಲಾಗುವುದು ಎಂದು ಸಚಿವ ಅಜಯ್ ಸಿಂಗ್ ಹೇಳಿದರು.
ಜೇವರ್ಗಿ ಕ್ಷೇತ್ರದ ಜನರು ಹಾಗೂ ಜಿಲ್ಲೆಯ ಜನತೆಯ ಆಶೀರ್ವಾದದಿಂದ ಸಚಿವನಾಗಿದ್ದು, ಪಕ್ಷದ ನಾಯಕರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಜನರ ಸೇವೆ ಮಾಡುವುದಾಗಿ ಅವರು ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಅಫಜಲಪೂರ ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣಕುಮಾರ ಮೋದಿ ಇದ್ದರು.






