ಅಹಮದಾಬಾದ್ ವಿಮಾನ ದುರಂತದ ಸುದ್ದಿ ಕೇಳಿ ಆಘಾತವಾಗಿದೆ : ಮಲ್ಲಿಕಾರ್ಜುನ್ ಖರ್ಗೆ

ಕಲಬುರಗಿ: ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ಸುದ್ದಿ ಕೇಳಿ ಆಘಾತವಾಗಿದೆ. ಏಕಕಾಲಕ್ಕೆ ನೂರಕ್ಕೂ ಹೆಚ್ಚು ಜನ ಮೃತಪಟ್ಟಿರುವುದನ್ನು ಕಂಡು ನನಗೆ ಬಹಳಷ್ಟು ಆಘಾತವುಂಟು ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ವಿಮಾನ ದುರಂತದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿಮಾನ ಟೇಕ್ ಆಫ್ ಆಗಿರುವ ಕ್ಷಣದಲ್ಲೇ ವಿಮಾನ ಪತನವಾಗಿದೆ. ಇದೊಂದು ದೊಡ್ಡ ದುರಂತ, ಇಂತಹ ಘಟನೆ ಆಗಬಾರದಿತ್ತು. ಘಟನೆಯಲ್ಲಿ ಮೃತಪಟ್ಟ ಭಾರತೀಯರು ಮತ್ತು ಬ್ರಿಟಿಷ್ ನಾಗರಿಕರಿಗೆ ತೀವ್ರ ಸಂತಾಪ ಸೂಚಿಸುತ್ತೇನೆ. ಇದರಲ್ಲಿ ಬದುಕುಳಿದವರಿಗೆ ಬೇಗನೆ ಚಿಕಿತ್ಸೆ ಕೊಡಬೇಕು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾನಿಯಾಗಿರುವ ಬಗ್ಗೆ ಸರಕಾರ ಗಮನ ಹರಿಸಬೇಕು, ಯಾರು ದುಃಖದಲ್ಲಿದ್ದಾರೋ ಅವರನ್ನು ಸಂತೈಸುವ ಕೆಲಸ ಸರಕಾರ ಬೇಗ ಮಾಡಬೇಕು ಎಂದು ಒತ್ತಾಯಿಸಿದರು.
ದುರ್ಘಟನೆ ನಡೆದ ಸ್ಥಳದಲ್ಲಿನ ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರು ಸೇರಿದಂತೆ ಇನ್ನಿತರ ಸಾಮಾಜಿಕ ಸಂಘ, ಸಂಸ್ಥೆಗಳು ಭಾಗಿಯಾಗಿ ಸಂಕಷ್ಟದಲ್ಲಿರುವ ಸಂತ್ರಸ್ತರ ಕುಟುಂಬದ ನೆರವಿಗೆ ನಿಲ್ಲಬೇಕು ಎಂದು ಮಲ್ಲಿಕಾರ್ಜುನ್ ಖರ್ಗೆ ಅವರು ಮನವಿ ಮಾಡಿದರು.
ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಉನ್ನತ ತನಿಗೆಯಾಗಲಿ :
ವಿಮಾನವನ್ನು ಬೇಗನೆ ಬಿಡುವಂತೆ ಕೆಲ ಪ್ರಯಾಣಿಕರ ಒತ್ತಡವೂ ಇತ್ತು ಎನ್ನುವುದು ನನಗೆ ಮಾಹಿತಿ ಬಂದಿದೆ. ಇದರ ಕುರಿತು ಪರಿಶೀಲನೆ ಆಗಬೇಕು, ಕೆಲವರಿಗೆ ವಾತಾವರಣ ಸರಿ ಇಲ್ಲ ಅಂದರೂ ಅವರು ವಿಮಾನ ಬಿಡಲು ಒತ್ತಡ ಹೇರಿದ್ದಾರೆ. ಹಾಗಾಗಿ ಇದರ ಕುರಿತು ಸಂಪೂರ್ಣ ತನಿಖೆಗಾಗಿ ಸುಪ್ರಿಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಉನ್ನತ ತನಿಖಾ ಸಮಿತಿ ರಚಿಸಬೇಕು, ಉನ್ನತ ಸಮಿತಿ ವತಿಯಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದರೆ ಈ ದುರಂತಕ್ಕೆ ತಾಂತ್ರಿಕ ತೊಂದರೆ ಆಗಿದೆಯೋ, ಪೈಲೆಟ್, ಡಿಜಿ ಅಥವಾ ಅಲ್ಲಿನ ಇತರ ಅಧಿಕಾರಿಗಳ ತಪ್ಪು ಆಗಿರುವ ಕುರಿತು ಸತ್ಯ ಹೊರಗೆ ಬರುತ್ತದೆ ಎಂದು ತಿಳಿಸಿದರು.







