ರಾಜ್ಯದಲ್ಲಿ 52 ಸಾವಿರ ಶಿಕ್ಷಕರ ಕೊರತೆ : ಸಚಿವ ಮಧು ಬಂಗಾರಪ್ಪ

ಕಲಬುರಗಿ : ರಾಜ್ಯದಲ್ಲಿ ಪ್ರಸ್ತುತ 51 ರಿಂದ 52 ಸಾವಿರ ಶಿಕ್ಷಕರ ಕೊರತೆ ಇದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇರುವ ಶಿಕ್ಷಕರ ಕೊರತೆಯ ಶೇ.80ರಷ್ಟು ನೇಮಕಾತಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಟಿಇಟಿ ಪರೀಕ್ಷೆಯ ಮೂಲಕ 5,800 ಶಿಕ್ಷಕರ ನೇಮಕಾತಿಗೆ ಆದೇಶ ನೀಡಲಾಗಿದೆ. ಉಳಿದ ಹುದ್ದೆಗಳಿಗೆ 5,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲು ಶೇ.100 ರಷ್ಟು ನೇಮಕಾತಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.
ಕಳೆದ ಎರಡೂವರೆ ವರ್ಷಗಳಲ್ಲಿ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಆವಿಷ್ಕಾರ ಯೋಜನೆಯ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಜೊತೆಗೆ ಶಾಲೆಗಳ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ವತಿಯಿಂದ 600, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ಸಿ.ಎಸ್.ಆರ್ ನಿಧಿಯಡಿ ತಲಾ 100 ಸೇರಿ ಒಟ್ಟು 900 ಕೆ.ಪಿ.ಎಸ್ ಶಾಲೆಗಳನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಇಲಾಖೆಯಿಂದ 100 ಶಾಲೆಗಳು ಮತ್ತು ಕೆ.ಕೆ.ಆರ್.ಡಿ.ಬಿ ಮಂಡಳಿಯಿಂದ ಹೆಚ್ಚುವರಿಯಾಗಿ 200 ಕೆ.ಪಿ.ಎಸ್ ಶಾಲೆಗಳು ಅಸ್ತಿತ್ವಕ್ಕೆ ಬರಲಿವೆ ಎಂದು ತಿಳಿಸಿದರು.
ಕೆ.ಪಿ.ಎಸ್ ಶಾಲೆಗಳಲ್ಲಿ ಎಲ್.ಕೆ.ಜಿ ಯಿಂದ ದ್ವಿತೀಯ ಪಿ.ಯು.ಸಿ ವರೆಗೆ ಒಂದೇ ಕಡೆ ಶಿಕ್ಷಣ ದೊರೆಯಲಿದೆ. ತರಗತಿಗೆ ಅನುಗುಣವಾಗಿ ಕಂಪ್ಯೂಟರ್ ಶಿಕ್ಷಣ, ಸಂಗೀತ, ಧ್ವಿಭಾಷಾ ಕಲಿಕೆ, ಕೌಶಲ್ಯ ತರಬೇತಿ ನೀಡಲಾಗುತ್ತದೆ. ಮುಂದಿನ 3–4 ವರ್ಷಗಳಲ್ಲಿ ಗುಣಾತ್ಮಕ ಶೈಕ್ಷಣಿಕ ಬದಲಾವಣೆ ಸಾಧ್ಯ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಎಸೆಸೆಲ್ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಗಳನ್ನು ವರ್ಷದಲ್ಲಿ ಮೂರು ಬಾರಿ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಇದರ ಪರಿಣಾಮವಾಗಿ 2025ರಲ್ಲಿ 1.16 ಲಕ್ಷ ಎಸೆಸೆಲ್ಸಿ ಹಾಗೂ 56 ಸಾವಿರ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಮುಂದಿನ 2026-27ನೇ ಶೈಕ್ಷಣಿಕ ಸಾಲಿನಿಂದ ಶಿಕ್ಷಕರು-ಮಕ್ಕಳಿಗೆ ಮುಖ ಹಾಜರಾತಿ ವ್ಯವಸ್ಥೆ ಮತ್ತು ದ್ವಿತೀಯ ಪಿ.ಯು.ಸಿ. ಮಕ್ಕಳಿಗೆ ಉಚಿತ ನೋಟ್ ಬುಕ್ ನೀಡುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದಲ್ಲದೆ ಶಿಕ್ಷಕರ ಮೇಲೆ ಕೆಲಸದ ಹೊರೆ ತಗ್ಗಿಸಲು ಈಗಾಗಲೆ ಮುಖ್ಯ ಕಾರ್ಯದರ್ಶಿ ಜೊತೆಗೆ ಚರ್ಚಿಸಲಾಗಿದೆ ಎಂದರು.
ಕೆ.ಪಿ.ಎಸ್ ಶಾಲೆಗಳಲ್ಲಿ ದೈಹಿಕ ಶಿಕ್ಷಣ, ಕಲೆ ಹಾಗೂ ಸಂಗೀತ ಶಿಕ್ಷಕರಿಗೆ ಪ್ರತ್ಯೇಕ ನೇಮಕಾತಿ ಮಾಡಲಾಗುತ್ತದೆ. ಜೊತೆಗೆ ನೋಟ್‌ಬುಕ್ ಮತ್ತು ಪಠ್ಯಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್, ಜಿಲ್ಲಾ ಪಂಚಾಯತ್ ಸಿಇಒ ಭಂವಾರ್ ಸಿಂಗ್ ಮೀನಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಆಯುಕ್ತ ರಾಹುಲ್ ಪಾಂಡ್ವೆ ಉಪಸ್ಥಿತರಿದ್ದರು.
ಮಾರಲ್ ಸೈನ್ಸ್ ಶಿಕ್ಷಣಕ್ಕೆ ಒತ್ತು :
ಮಕ್ಕಳ ಭವಿಷ್ಯಕ್ಕೆ ಅನುಗುಣವಾಗಿ ಇರುವ ಶಿಕ್ಷಣವನ್ನು ಸರ್ಕಾರದಿಂದ ನೀಡುತ್ತೇವೆ. ಇಂದಿನ ಮಕ್ಕಳು ಮಾರಲ್ ಸೈನ್ಸ್ ಮರೆತ್ತಿದ್ದಾರೆ. ಭಗವತ್ ಗೀತೆ, ಬೈಬಲ್ ಹಾಗು ಕುರಾನ್ ನನಗೆ ಸಂಬಂಧ ಇಲ್ಲ. ಮಕ್ಕಳ ಭವಿಷ್ಯಕ್ಕೆ ಉಪಯೋಗಕ್ಕೆ ಬೇಕಾಗುವ ಪಠ್ಯಚಟುವಟಿಕೆ ನೀಡುತ್ತೇವೆ.
-ಮಧು ಬಂಗಾರಪ್ಪ (ಸಚಿವ)







