ಎಸ್ಐಆರ್ | ಕಲಬುರಗಿ ದಕ್ಷಿಣದಲ್ಲಿ 20,806 ಮತದಾರರಿಗೆ ನೋಟಿಸ್ ಜಾರಿ

ಸಾಂದರ್ಭಿಕ ಚಿತ್ರ | Photo Credit : PTI
ಕಲಬುರಗಿ : ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ–2026 (SIR) ಅಂಗವಾಗಿ ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯಲ್ಲಿ 2002ರ ಎಸ್ಐಆರ್ ಪಟ್ಟಿಯ ಮಾಹಿತಿ ನೀಡದ ಹಾಗೂ ದಾಖಲೆಗಳಿಗೆ ತಾಳೆಯಾಗದ 31,079 ಮತದಾರರ ಪೈಕಿ 20,806 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ (ಅಭಿವೃದ್ಧಿ) ಪ್ರಮೀಳಾ ಎಂ.ಕೆ. ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, 31,079 ಮತದಾರರಲ್ಲಿ ಈಗಾಗಲೇ 20,806 ಮಂದಿಗೆ ನೋಟಿಸ್ ತಲುಪಿಸಲಾಗಿದ್ದು, ಉಳಿದ 10,275 ಮಂದಿಗೆ ನೋಟಿಸ್ ನೀಡುವ ಪ್ರಕ್ರಿಯೆ ಮುಂದುವರಿದಿದೆ ಎಂದು ಹೇಳಿದರು.
ಆಗಸ್ಟ್ 24ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ ಕ್ಷೇತ್ರದಲ್ಲಿ ಒಟ್ಟು 2,29,997 ಮತದಾರರು ಇದ್ದಾರೆ. ಇದರಲ್ಲಿ 2002ರ ಎಸ್ಐಆರ್ ಪಟ್ಟಿಯೊಂದಿಗೆ ಮಾಹಿತಿ ಹೊಂದಾಣಿಕೆಯಾಗದ ನೋ ಮ್ಯಾಪಿಂಗ್ ಹಾಗೂ ಅನೋಮಲೀಸ್ ಪ್ರಕರಣಗಳಿಗೆ ಸಂಬಂಧಿಸಿದ ಮತದಾರರ ವಿಚಾರಣೆ ಸೆಪ್ಟೆಂಬರ್ 5ರಿಂದ ಆರಂಭವಾಗಿದ್ದು, ಅಕ್ಟೋಬರ್ 12 ಕೊನೆಯ ವಿಚಾರಣೆ ದಿನವಾಗಿರುತ್ತದೆ ಎಂದು ತಿಳಿಸಿದರು.
ಇದೇ ವೇಳೆ, ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಿಕೊಳ್ಳಲು ಬಯಸುವವರಿಗಾಗಿ ಸೆಪ್ಟೆಂಬರ್ 19 ಮತ್ತು 20ರಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅರ್ಹ ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮತದಾರರ ನೋಂದಣಾಧಿಕಾರಿ ಮನವಿ ಮಾಡಿದ್ದಾರೆ.






