ಶಿಕ್ಷಕರ ಕಲ್ಯಾಣಕ್ಕೆ ಸಂಘಟನೆಗಳ ಒಗ್ಗಟ್ಟಿನ ಕಾರ್ಯ ಅಗತ್ಯ: ಬಸವರಾಜ ಬಳ್ಳುಂಡಗಿ

ಕಲಬುರಗಿ: ಜಿಲ್ಲೆಯ ಎಲ್ಲಾ ಶಿಕ್ಷಕರ ಸಂಘಟನೆಗಳು ಪರಸ್ಪರ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ಶಿಕ್ಷಕರ ಅಭಿವೃದ್ಧಿ ಹಾಗೂ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂದು ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳುಂಡಗಿ ಕರೆ ನೀಡಿದರು.
ನಗರದ ಖಾಸಗಿ ಸಭಾಂಗಣದಲ್ಲಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಲಬುರಗಿ ಘಟಕದ ವತಿಯಿಂದ ಗೃಹ ನಿರ್ಮಾಣ ಮಂಡಳಿಯ ಪದಾಧಿಕಾರಿಗಳು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳು ಹಾಗೂ ಕಮಲಾಪುರ ತಾಲೂಕು, ಉತ್ತರ ಮತ್ತು ದಕ್ಷಿಣ ವಲಯದ ಪದಾಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರ ಸಂಘಟನೆಗಳು ಒಂದೇ ಗುರಿಯೊಂದಿಗೆ ಕಾರ್ಯನಿರ್ವಹಿಸಿದಾಗ ಶಿಕ್ಷಕರ ಸಮಸ್ಯೆಗಳ ಪರಿಹಾರ ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಬಲ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಕ್ಷೇತ್ರಾಧಿಕಾರಿ ಭರತರಾಜ ಸವಳಗಿ ಮಾತನಾಡಿ, ಶಿಕ್ಷಕರ ಕಲ್ಯಾಣವೇ ಸಂಘ-ಸಂಸ್ಥೆಗಳ ಪ್ರಮುಖ ಧ್ಯೇಯವಾಗಿರಬೇಕು. ಎಲ್ಲಾ ಶಿಕ್ಷಕರ ಸಂಘಟನೆಗಳು ಪರಸ್ಪರ ಸಹಕಾರ ಮತ್ತು ಸಮನ್ವಯದಿಂದ ಶಿಕ್ಷಕರ ಹಿತಾಸಕ್ತಿಗಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಗೃಹ ನಿರ್ಮಾಣ ಮಂಡಳಿಯ ಉಪಾಧ್ಯಕ್ಷ ಅನಂತ ತೀರ್ಥ ಜೋಷಿ ಮಾತನಾಡಿ, ಸಂಘಟನೆಗಳು ನಿಸ್ವಾರ್ಥ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ಗೃಹ ನಿರ್ಮಾಣ ಮಂಡಳಿಯ ಸದಸ್ಯತ್ವವನ್ನು ಅನುದಾನಿತ ಶಿಕ್ಷಕರಿಗೂ ವಿಸ್ತರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಸಮಾರಂಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ್ ಗಂಗೂ, ಕಮಲಾಪುರ ತಾಲೂಕು ಅಧ್ಯಕ್ಷ ಪರಮೇಶ್ವರ ಓಕಳಿ, ಉತ್ತರ ವಲಯದ ಅಧ್ಯಕ್ಷ ಅಶೋಕ್ ಸೊನ್ನ ಹಾಗೂ ದಕ್ಷಿಣ ವಲಯದ ಅಧ್ಯಕ್ಷ ಸಂಗಣ್ಣ ಜಾಬಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾನಂದ ಪಾಸೋಡಿ ವಹಿಸಿದ್ದರು. ಗೌರವಾಧ್ಯಕ್ಷ ಅಂಬದಾಸ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷ ಅರುಣಕುಮಾರ್ ಪಾಟೀಲ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮರಿಯಪ್ಪ ಹೊಸಮನಿ, ಅನುದಾನಿತ ರಾಜ್ಯ ಸಮಿತಿಯ ಸದಸ್ಯ ಪ್ರೇಮ್ ಸಿಂಗ್ ರಾಥೋಡ್ ಹಾಗೂ ಜಿಲ್ಲಾ ಕಾರ್ಯದರ್ಶಿ ರೇವಣಸಿದ್ದಯ್ಯ ವೈದ್ಯ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗೃಹ ನಿರ್ಮಾಣ ಮಂಡಳಿಯ ಸದಸ್ಯರು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಕಮಲಾಪುರ ತಾಲೂಕು, ಉತ್ತರ ಮತ್ತು ದಕ್ಷಿಣ ವಲಯದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಸಂಘದ ಕಾರ್ಯದರ್ಶಿ ಕೃಷ್ಣಪ್ಪ ನಾಯಕ ಜಹಾಗೀರದಾರ ಸ್ವಾಗತಿಸಿದರು. ಪ್ರಭುಲಿಂಗ ಮುಲಗೆ ಕಾರ್ಯಕ್ರಮ ನಿರೂಪಿಸಿದರು. ಜೀವನ್ ಕುಮಾರ್ ರಾಥೋಡ್ ವಂದನಾರ್ಪಣೆ ಸಲ್ಲಿಸಿದರು. ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.






