ಸೂಫಿ–ಶರಣರ ಸೌಹಾರ್ದ ಬದುಕು ಇಂದಿನ ಸಮಾಜಕ್ಕೆ ಅಗತ್ಯ: ಗುದ್ದಿ

ಕಲಬುರಗಿ: ಸೂಫಿ ಸಂತ ಹಜರತ್ ಖ್ವಾಜಾ ಬಂದಾನವಾಝ್ ಗೇಸುದರಾಜ್ ಅವರ ಜೀವನ, ತತ್ವಚಿಂತನೆ, ಸಾಮಾಜಿಕ ಸೇವೆ ಹಾಗೂ ಸಾಹಿತ್ಯಿಕ ಕೊಡುಗೆಗಳು ಇಂದಿನ ಸಮಾಜಕ್ಕೂ ಮಾರ್ಗದರ್ಶಕವಾಗಿವೆ ಎಂದು ಸಾಹಿತಿ-ಚಿಂತಕ ಮನೋಜಕುಮಾರ ಗುದ್ದಿ ಅಭಿಪ್ರಾಯಪಟ್ಟರು.
ನಗರದ ವಿಶ್ವನಾಥರೆಡ್ಡಿ ಮುದ್ನಾಳ ಪದವಿ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಆಯೋಜಿಸಿದ್ದ ‘ಬಂದಾನವಾಝ್ ಮತ್ತು ಸೂಫಿ ಸಾಹಿತ್ಯ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ವಿಶ್ವನಾಥರೆಡ್ಡಿ ಮುದ್ನಾಳ ಅವರ ಬದುಕು ಈ ಭಾಗದ ಸೌಹಾರ್ದ ಪರಂಪರೆಯ ಪ್ರತೀಕವಾಗಿತ್ತು. ಅವರ ಹೆಸರಿನ ಕಾಲೇಜಿನಲ್ಲಿ ಸೂಫಿ ಸಾಹಿತಿ ಬಂದಾನವಾಝ್ ಕುರಿತು ಉಪನ್ಯಾಸ ಆಯೋಜಿಸಿರುವುದು ಅರ್ಥಪೂರ್ಣ ಕಾರ್ಯವಾಗಿದೆ” ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಬೋಡೆ ರಿಯಾಜ್ ಅಹ್ಮದ್ ಅವರು, ಖ್ವಾಜಾ ಬಂದಾನವಾಝರು ಬಾಲ್ಯದಲ್ಲಿಯೇ ದೇವಗಿರಿ (ದೌಲತಾಬಾದ್) ಪ್ರದೇಶಕ್ಕೆ ಬಂದು ತಮ್ಮ ತಂದೆಯ ನಿಧನದ ಬಳಿಕ ದೆಹಲಿಗೆ ತೆರಳಿ ಅಲ್ಲಿನ ಸೂಫಿ ಪರಂಪರೆಯ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಶಿಕ್ಷಣ ಪಡೆದರು. ಸುಮಾರು 44 ವರ್ಷಗಳ ಕಾಲ ಧಾರ್ಮಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಉಪನ್ಯಾಸಗಳ ಮೂಲಕ ಸಾವಿರಾರು ಶಿಷ್ಯರನ್ನು ರೂಪಿಸಿದರು ಎಂದು ವಿವರಿಸಿದರು.
ಕ್ರಿ.ಶ. 1398ರಲ್ಲಿ ತೈಮೂರನ ದೆಹಲಿಯ ಮೇಲಿನ ದಾಳಿಯ ಸಂದರ್ಭದಲ್ಲಿ ದಕ್ಷಿಣ ಭಾರತಕ್ಕೆ ಆಗಮಿಸಿದ ಬಂದಾನವಾಝರು, ಬಳಿಕ ಗುಲ್ಬರ್ಗಾದಲ್ಲಿ ನೆಲೆಸಿದರು. ಅವರ ಜ್ಞಾನ, ಸರಳತೆ ಮತ್ತು ಆಧ್ಯಾತ್ಮಿಕ ವ್ಯಕ್ತಿತ್ವದಿಂದ ಪ್ರಭಾವಿತರಾದ ಬಹಮನಿ ಸುಲ್ತಾನ ಫಿರೋಜ್ ಶಾ ಬಹಮನಿ ಅವರಿಗೆ ಆಶ್ರಯ ಕಲ್ಪಿಸಿದರು. ನಂತರ ಜನಸಾಮಾನ್ಯರ ಮಧ್ಯೆ ವಾಸವಿದ್ದು, ಜಾತಿ–ಮತ–ಧರ್ಮಗಳ ಭೇದವಿಲ್ಲದೆ ಮಾನವೀಯತೆಯ ಸಂದೇಶ ಸಾರಿದರು ಎಂದು ಹೇಳಿದರು.
ಸೂಫಿ ಸಾಹಿತಿ ಡಾ. ಪರ್ವಿನ್ ಸುಲ್ತಾನಾ ಮಾತನಾಡಿ, “ಬಂದಾನವಾಝ್ ಅವರ ಸಂದೇಶ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿರದೆ ಸಮಸ್ತ ಮಾನವಕುಲದ ಒಳಿತಿಗಾಗಿ ರೂಪುಗೊಂಡ ವಿಶ್ವಮಾನವೀಯ ಚಿಂತನೆಯಾಗಿದೆ. ಪ್ರೀತಿ, ಕರುಣೆ, ಸೇವೆ ಮತ್ತು ಸಹಿಷ್ಣುತೆಯ ಮೌಲ್ಯಗಳನ್ನು ಅವರು ಪ್ರತಿಪಾದಿಸಿದ್ದು, ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ” ಎಂದರು.
ಮುಖ್ಯಅತಿಥಿ ಶರಣಗೌಡ ಪಾಟೀಲ ಪಾಳಾ ಮಾತನಾಡಿ, “ಬಸವಣ್ಣನ ಸಮಾನತೆಯ ಆಶಯವನ್ನು ಈ ಭಾಗದಲ್ಲಿ ಬಿತ್ತಿ ಬೆಳೆಸಿದವರಲ್ಲಿ ಸೂಫಿಗಳ ಪಾತ್ರ ಮಹತ್ವದ್ದಾಗಿದೆ. ಇಂದಿನ ಸಮಾಜಕ್ಕೆ ಸೂಫಿ–ಶರಣರ ಸೌಹಾರ್ದ ಬದುಕಿನ ಮೌಲ್ಯಗಳು ಅತ್ಯಗತ್ಯ” ಎಂದು ಹೇಳಿದರು.
ಡಾ. ವೀರಶೆಟ್ಟಿ ಗಾರಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಬಸವರಾಜ ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಡಾ. ಪ್ರೇಮಾ ಅಪಚಂದ, ಡಾ. ಶರಣಬಸಪ್ಪ ವಡ್ಡನಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಾಗೇಶ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು. ಸಿದ್ದರಾಮ ಕಲಬುರ್ಗಿ ಸ್ವಾಗತಿಸಿದರು. ವೀಣಾ ರಾವೂರ ವಂದಿಸಿದರು.






