ಗೊಂದಲ ಸೃಷ್ಟಿಸಿದ ಬೀದರ್ ಎಸ್‌ಪಿ, ಕಲಬುರಗಿ ಕಮಿಷನರ್ ಹೇಳಿಕೆ

ಕಲಬುರಗಿ : ನಗರದ ಹೊರವಲಯದ ಕೇಂದ್ರ ಕಾರಾಗೃಹದಿಂದ ಮಂಗಳವಾರ ಬೆಳಗಿನ ಜಾವ ಮೂವರು ಕೈದಿಗಳು ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಬಂಧನ ಸ್ಥಳದ ಬಗ್ಗೆ ಗೊಂದಲಮಯ ಹೇಳಿಕೆ ನೀಡಿದ್ದು, ಈ ಪ್ರಕರಣ ಮತ್ತಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ಮೂವರು ಅಪರಾಧಿಗಳ ಪೈಕಿ ಸಂತೋಷ ಎನ್ನುವ ಕೈದಿಯನ್ನು ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಸಂಜೆ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.
ಜೈಲಿನಿಂದ ಪರಾರಿಯಾದ ಬಳಿಕ ಮೂವರಲ್ಲಿ ಇಬ್ಬರು ಕೈದಿಗಳು ಕಲಬುರಗಿಯಿಂದ ಹುಮನಾಬಾದ್ ಕಡೆಗೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ ಎನ್ನಲಾಗಿದ್ದು, ಹುಮನಾಬಾದ್ ಹೊರವಲಯದಲ್ಲಿ ಪೊಲೀಸರು ವಾಹನಗಳ ತಪಾಸಣೆ ಕಾರ್ಯ ನಡೆಸುತ್ತಿದ್ದರು. ಬಸ್‌ನಲ್ಲಿದ್ದ ಕೈದಿಗಳು ಅದನ್ನು ಗಮನಿಸಿ ಕೈಗಾರಿಕಾ ಪ್ರದೇಶದಲ್ಲಿ ಓಡಿ ಹೋಗಲು ಯತ್ನಿಸಿದ್ದಾರೆ. ಅವರನ್ನು ಬೆನ್ನು ಹತ್ತಿದ್ದ ಪೊಲೀಸರು ಸಂತೋಷನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಬ್ಬ ಕೈದಿಯ ಬಂಧನಕ್ಕೆ ಜಾಲ ಬೀಸಿದ್ದಾರೆ ಎಂದು ವರದಿಯಾಗಿತ್ತು.
ಆದರೆ ಅದೇ ಸಂತೋಷ್ ಎಂಬ ಕೈದಿಯನ್ನು ಬುಧವಾರ ಬೆಳಗ್ಗೆ ಶೂಟೌಟ್ ನಡೆಸಿ, ಬಂಧಿಸಲಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರು, ಬುಧವಾರ ಬೆಳಗ್ಗೆ ಹುಮನಾಬಾದ್ ರಿಂಗ್ ರಸ್ತೆ ಕೈಗಾರಿಕಾ ಪ್ರದೇಶದ ಬಳಿ ಓಡಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಶರಣಾಗಲು ನಿರಾಕರಿಸಿದ ಕೈದಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದು, ಈ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು, ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದು, ಕೈದಿಯ ಬಲಗಾಲಿಗೆ ಗುಂಡು ತಗುಲಿದೆ ಎಂದು ಹೇಳಿದ್ದಾರೆ.
ಗಾಯಗೊಂಡ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಗಾಯಗೊಂಡ ಕೈದಿಯನ್ನು ಕಲಬುರಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಆರೋಗ್ಯ ಸ್ಥಿರವಾಗಿದೆ. ಇದಕ್ಕೂ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ ಎಂದು ಸ್ವತಃ ಪೊಲೀಸ್ ಆಯುಕ್ತರೇ ತಿಳಿಸಿದ್ದಾರೆ.
ಬಂಧನದ ಸಮಯ ಮತ್ತು ವಿವರಗಳ ಕುರಿತು ಎರಡೂ ಹೇಳಿಕೆಗಳು ಭಿನ್ನವಾಗಿರುವುದರಿಂದ, ಯಾವುದು ಸರಿಯಾಗಿದೆ ಎಂಬುದರ ಬಗ್ಗೆ ಗೊಂದಲ ಉಂಟಾಗಿದೆ. ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಅವರ ಹೇಳಿಕೆಯೇ ಸರಿಯೇ ಅಥವಾ ಕಲಬುರಗಿ ಪೊಲೀಸ್ ಆಯುಕ್ತರ ಹೇಳಿಕೆಯೇ ನಿಖರವೇ? ಎಂಬ ಪ್ರಶ್ನೆ ಎದುರಾಗಿದೆ.
ಜು.13ರ ಮಧ್ಯರಾತ್ರಿ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಶಿಕ್ಷಿತ ಕೈದಿಗಳು ಜೈಲಿನ ಭದ್ರತಾ ಗೋಡೆ ಹಾರಿ ಪರಾರಿಯಾಗಿದ್ದರು. ಈ ಘಟನೆ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಉಳಿದ ಇಬ್ಬರು ಪರಾರಿಯಾಗಿರುವ ಕೈದಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.
ಪರಾರಿ ಆಗಿರುವ ಕೈದಿ ಸೆರೆ ಹಿಡಿದಿದ್ದು ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ. ಆದರೆ, ಪೊಲೀಸ್ ಕಮಿಷನರ್ ಅವರು ಅದೇ ಕೈದಿಯನ್ನು ಕಲಬುರಗಿ ನಗರದ ಕೈಗಾರಿಕಾ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಹೇಳಿಕೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸಿದೆ. ಇಂತಹ ಹೇಳಿಕೆಯಿಂದಾಗಿ ಪೊಲೀಸ್ ಅಧಿಕಾರಿಗಳು ಗೃಹ ಸಚಿವರನ್ನು ಮೆಚ್ಚಿಸಲು ಹೊರಟಿದ್ದಾರೆಯೇ? ಎಂಬ ಪ್ರಶ್ನೆ ಕಾಡತೊಡಗಿದೆ.
-ಹಣಮಂತರಾಯ ಬಿ.ಪೂಜಾರಿ, ಸಾಮಾಜಿಕ ಕಾರ್ಯಕರ್ತ






