ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮಲತಾಯಿ ಧೋರಣೆ ಖಂಡನಾರ್ಹ : ಡಾ.ಲಕ್ಷ್ಮಣ್ ದಸ್ತಿ
ಕೇಂದ್ರ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಅನುದಾನ ನೀಡಲು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಆಗ್ರಹ

ಕಲಬುರಗಿ : ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಸರಕಾರದ ಈ ಬಾರಿಯ ಬಜೆಟ್ನಲ್ಲಿ ವಿಶೇಷ ಆದ್ಯತೆ ನೀಡುವ ಮೂಲಕ ನೆನೆಗುದಿಗೆ ಬಿದ್ದಿರುವ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಹಾಗೂ ಹೊಸ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ್ ದಸ್ತಿ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 11 ವರ್ಷಗಳಿಂದ ಕೇಂದ್ರ ಸರಕಾರ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನಿರಂತರ ನಿರ್ಲಕ್ಷ ಮತ್ತು ಮಲತಾಯಿ ಧೋರಣೆ ಮಾಡುತ್ತಿರುವುದು ಖಂಡನಾರ್ಹ. ಮುಂಬರುವ ಬಜೆಟ್ನಲ್ಲಿ ಕೇಂದ್ರ ಸರಕಾರ ನಮ್ಮ ಪ್ರದೇಶಕ್ಕೆ ಮತ್ತೆ ನಿರ್ಲಕ್ಷ ತೋರಿದರೆ ನಮ್ಮ ಹೋರಾಟ ಬೇರೆ ರೂಪಕ್ಕೆ ತಾಳುತ್ತದೆ ಎಂದು ಎಚ್ಚರಿಸಿದರು.
ಜನವರಿ ಎರಡನೇ ವಾರದಲ್ಲಿ ನಮ್ಮ ಸಮಿತಿಯು ಪರಿಣಿತ ತಜ್ಞರ ದುಂಡು ಮೇಜಿನ ಸಭೆ ನಡೆಸಿ, ಕಲಬುರಗಿ ಲೋಕಸಭೆ ಸದಸ್ಯ ರಾಧಾಕೃಷ್ಣ ದೊಡ್ಡಮನಿಯವರ ಮುಖಾಂತರ ಕೇಂದ್ರ ಸರಕಾರಕ್ಕೆ 13 ಬೇಡಿಕೆಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಸಂಸದರು ಸಮಿತಿ ಸಲ್ಲಿಸಿರುವ 13 ಬೇಡಿಕೆಗಳ ಬಗ್ಗೆ ಪ್ರಧಾನಿ ಸೇರಿದಂತೆ, ಸಂಬಂಧಪಟ್ಟ ಏಳು ಕೇಂದ್ರದ ಸಚಿವರಿಗೆ ಪತ್ರ ಬರೆದು ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಈಗಾಗಲೇ ಕೇಂದ್ರ ಸರಕಾರ ಘೋಷಣೆ ಮಾಡಿರುವ ಯೋಜನೆಗಳ ಅನುಷ್ಠಾನಕ್ಕೆ ಹಾಗೂ ಹೊಸ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಧಿಕೃತ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕದ 6 ಜನ ಲೋಕಸಭಾ ಸದಸ್ಯರ ಸಭೆ ನಡೆಸಿ ಕೇಂದ್ರದ ಮೇಲೆ ಬಲವಾದ ಒತ್ತಡ ತರುವ ಬಗ್ಗೆ ಸಮಿತಿಗೆ ಅಧಿಕೃತ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸರಕಾರ ಈಗಾಗಲೇ ಘೋಷಣೆ ಮಾಡಿರುವಂತೆ ನೆನೆಗುದಿಗೆ ಬಿದ್ದಿರುವ ಬೀದರ್-ಬಳ್ಳಾರಿ ವರೆಗೆ ಚತುಸ್ಪತ ಕಾಮಗಾರಿ ಪೂರ್ಣಗೊಳಿಸಬೇಕು. ಭಾರತಮಾಲ್ ಯೋಜನೆಯಂತೆ ಕಲ್ಯಾಣ ಕರ್ನಾಟಕದಲ್ಲಿ ಹೆದ್ದಾರಿಗಳ ಕಾಮಗಾರಿ ಪೂರ್ಣಗೊಳಿಸಬೇಕು. ಕಲಬುರಗಿ ಎರಡನೇ ವರ್ತುಲ ರಸ್ತೆಗೆ ಹಣ ಮಂಜೂರು ಮಾಡಿ, ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು.
ಈಗಾಗಲೇ ಮಂಜೂರಾಗಿರುವ ಮೆಗಾ ಜವಳಿ ಪಾರ್ಕ್ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಮನ್ವಯತೆಯ ಧೋರಣೆ ಅನುಸರಿಸಿ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕಲಬುರಗಿ, ಬೀದರ್ ವಿಮಾನ ನಿಲ್ದಾಣಗಳಿಗೆ ಉಡಾನ್ ಯೋಜನೆಗೊಳಪಡಿಸಿ ಕಲಬುರಗಿಯಿಂದ ವಿಮಾನಗಳು ಬೆಂಗಳೂರು, ದೆಹಲಿ, ಮುಂಬೈ, ತಿರುಪತಿ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೆ ವಿಮಾನ ಸೇವೆ ಪುನಃ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ಆರಂಭಕ್ಕಾಗಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ, ಅನುಸರಿಸದೆ ಅಭಿವೃದ್ಧಿ ಮಾನದಂಡದಂತೆ ಸ್ಥಾಪನೆ ಮಾಡಬೇಕು. ಕಲ್ಯಾಣ ಕರ್ನಾಟಕದ ಬೀದರ್ನಿಂದ ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿಯಿಂದ ಕಿತ್ತೂರು ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಜಿಲ್ಲೆಗಳ ಮಾರ್ಗವಾಗಿ ಬೆಂಗಳೂರಿಗೆ ಹೊಸ ಕಲ್ಯಾಣ ಕರ್ನಾಟಕ ಎಕ್ಸಪ್ರೆಸ್ ಸೇರಿದಂತೆ ಬೀದರ್ ಕಲಬುರಗಿಯಿಂದ ಎರಡು ಹೊಸ ರೈಲುಗಳು ಬೆಂಗಳೂರಿಗೆ ಆರಂಭಿಸಬೇಕು. ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಸ್ಥಗಿತವಾದ ಕಲಬುರಗಿ-ಹೈದರಾಬಾದ್, ವಿಜಯಪುರ-ರಾಯಚೂರು-ಗುಂತಕಲ್ ಹಾಗೂ ವಾಡಿ-ಹೈದ್ರಾಬಾದ್ ಫಲಕನುಮಾ ಪ್ಯಾಸೆಂಜರ್ ರೈಲುಗಳು ಪುನರಾರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ್ ದೇಶಮುಖ್, ಪ್ರೊ.ಪ್ರತಾಪಸಿಂಗ್ ತಿವಾರಿ, ಪ್ರೊ.ಆರ್.ಕೆ.ಹುಡಗಿ, ಡಾ.ಮಾಜಿದ್ ದಾಗಿ, ಪ್ರೊ.ಬಸವರಾಜ್ ಕುಮನೂರ್, ಪ್ರೊ.ಬಸವರಾಜ್ ಗುಲಶೆಟ್ಟಿ, ಡಾ.ಗಾಂಧೀಜೀ ಮೋಳಕೆರೆ, ಎಮ್.ಬಿ.ನಿಂಗಪ್ಪ, ಶಿವಲಿಂಗಪ್ಪ ಭಂಡಕ್, ಅಸ್ಲಂ ಚೌಂಗೆ ಸೇರಿದಂತೆ ಇತರರು ಇದ್ದರು.
ಕಲ್ಯಾಣ ಕರ್ನಾಟಕದ ವಿರೋಧಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ :
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಲ್ಯಾಣ ಕರ್ನಾಟಕ ಭಾಗದ ವಿರೋಧಿಯಾಗಿದ್ದಾರೆ. ಕೇಂದ್ರದಿಂದ ಕಲ್ಯಾಣ ಕರ್ನಾಟಕಕ್ಕೆ ಬರುವ ಮಹತ್ವದ ಯೋಜನೆಗಳನ್ನು ತಪ್ಪಿಸುತ್ತಿದ್ದಾರೆ. ಈಗಾಗಲೇ ನಮ್ಮಲ್ಲಿ ಸ್ಥಾಪನೆಯಾಗುವ ಐಐಟಿ, ಐಐಐಟಿ, ಏಮ್ಸ್ ಸೇರಿದಂತೆ ಇತರೆ ಯೋಜನೆಗಳನ್ನು ಅವರ ಕ್ಷೇತ್ರದ ಕಡೆಗೆ ವಾಲಿಸಿದ್ದಾರೆ. ಹೀಗಾಗಿ ನಮ್ಮ ಭಾಗಕ್ಕೆ ಶೂನ್ಯ ಬಜೆಟ್ ಮಂಡನೆಯಾಗುತ್ತಿದೆ, ಈ ಬಾರಿಯೂ ನಮಗೆ ಶೂನ್ಯ ಬಜೆಟ್ ಬಂದರೆ ಸಚಿವ ಜೋಶಿ ಸೇರಿದಂತೆ ಕೇಂದ್ರದ ವಿರುದ್ಧ ಹೋರಾಟ ನಡೆಸಲಾಗುತ್ತದೆ ಎಂದು ಸಮಿತಿಯ ಸದಸ್ಯರು ಎಚ್ಚರಿಸಿದ್ದಾರೆ.







