ಡಿಜಿಟಲ್ ಸಂಪರ್ಕ ವ್ಯವಸ್ಥೆ ಸದೃಢಗೊಳಿಸುವುದು ಕಾಲದ ಅಗತ್ಯ: ಡಾ. ಫಿರೋಝಾ ಮಿರಜ್ಕರ್

ಕಲಬುರಗಿ: ಡಿಜಿಟಲ್ ಸಂವಹನ ವ್ಯವಸ್ಥೆಯು ಇಂದಿನ ಸಮಾಜದ ಜೀವನಾಡಿಯಾಗಿದ್ದು, ವಿಪತ್ತುಗಳು ಹಾಗೂ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿಯೂ ನಿರಂತರ ಸೇವೆ ಒದಗಿಸುವ ಸದೃಢ ಸಂವಹನ ಜಾಲಗಳ ನಿರ್ಮಾಣ ಅತ್ಯಗತ್ಯವಾಗಿದೆ ಎಂದು ಕೆಬಿಎನ್ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಫಿರೋಜಾ ಡಿ. ಮಿರಜ್ಕರ್ ಅಭಿಪ್ರಾಯಪಟ್ಟರು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಭಾರತ) ಕಲಬುರಗಿ ಕೇಂದ್ರದ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ಟೆಲಿಕಮ್ಯುನಿಕೇಶನ್ ಮತ್ತು ಮಾಹಿತಿ ಸಮಾಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಉಪನ್ಯಾಸ ನೀಡಿದರು.
“ಡಿಜಿಟಲ್ ಲೈಫ್ ಲೈನ್ಸ್– ಸ್ಟ್ರೆಂಥಿಂಗ್ ರಿಸೈಲೆನ್ಸ್ ಇನ್ ಎ ಕನೆಕ್ಟೆಡ್ ವರ್ಲ್ಡ್” ಎಂಬ ವಿಷಯದಡಿ ಉಪನ್ಯಾಸ ನೀಡಿದ ಅವರು, ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್, ಸಾರಿಗೆ, ಆಡಳಿತ ಮತ್ತು ವಿಪತ್ತು ನಿರ್ವಹಣೆ ಸೇರಿದಂತೆ ಸಮಾಜದ ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಡಿಜಿಟಲ್ ಸಂವಹನ ವ್ಯವಸ್ಥೆಯ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಯುದ್ಧಗಳು, ಪ್ರಕೃತಿ ವಿಕೋಪಗಳು ಹಾಗೂ ಇತರ ತುರ್ತು ಸಂದರ್ಭಗಳಲ್ಲಿ ಸಂವಹನ ಜಾಲಗಳು ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇರುವುದರಿಂದ, ಅಂತಹ ಪರಿಸ್ಥಿತಿಗಳಲ್ಲಿಯೂ ಕಾರ್ಯನಿರ್ವಹಿಸುವ ಸದೃಢ ಸಂವಹನ ವ್ಯವಸ್ಥೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ತಿಳಿಸಿದರು.
ಸೈಬರ್ ಭದ್ರತೆ, ದತ್ತಾಂಶ ಸಂರಕ್ಷಣೆ, ಪರ್ಯಾಯ ಜಾಲ ವ್ಯವಸ್ಥೆಗಳು ಹಾಗೂ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳು ನಿರಂತರ ಡಿಜಿಟಲ್ ಸಂಪರ್ಕವನ್ನು ಖಚಿತಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಇಐ ಕಲಬುರಗಿ ಕೇಂದ್ರದ ಅಧ್ಯಕ್ಷ ಕಕ್ಕೇರಿ ಚಂದ್ರಶೇಖರ ಅತಿಥಿಗಳನ್ನು ಸ್ವಾಗತಿಸಿದರು. ಕೆಸಿಟಿ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ರಾಜಕುಮಾರ್ ಮುಖ್ಯ ಉಪನ್ಯಾಸಕರನ್ನು ಪರಿಚಯಿಸಿದರು.
ಐಇಐ ಕೇಂದ್ರದ ಗೌರವ ಕಾರ್ಯದರ್ಶಿ ಪ್ರೊ. ಉದಯಶಂಕರ್ ಬೆಳ್ಳಾರಿ ವಂದನಾರ್ಪಣೆ ಸಲ್ಲಿಸಿದರು. ಐಇಐ ಮ್ಯೂಸಿಕ್ ಕ್ಲಬ್ ಸದಸ್ಯ ಡಾ. ಪ್ರಕಾಶ್ ಪಟ್ಟಣ ಪ್ರಾರ್ಥನಾ ಗೀತೆ ಹಾಡಿದರು. ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ. ಅಕ್ಷತಾ ಶಾ ಕಾರ್ಯಕ್ರಮ ನಿರೂಪಿಸಿದರು.
ಐಇಐ ಕೇಂದ್ರದ ತಾಂತ್ರಿಕ ಉಪಸಮಿತಿಯ ಸಂಚಾಲಕ ಡಾ. ವಿಶಾಲದತ್ತ ಕೊಹಿರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು, ಇಂಜಿನಿಯರ್‌ಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು.






