ಸಿದ್ಧಸಿರಿ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸದಿದ್ದರೆ ಹೋರಾಟ: ಮಾಜಿ ಶಾಸಕ ಪಾಟೀಲ್ ತೇಲ್ಕೂರ್

ಕಲಬುರಗಿ : ರೈತರ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಚಿಂಚೋಳಿ ಸಿದ್ಧಸಿರಿ ಸಕ್ಕರೆ ಕಾರ್ಖಾನೆ ಪುನಃ ಪ್ರಾರಂಭಿಸಲು ರಾಜ್ಯ ಸರಕಾರ ಮುಂದಾಗಬೇಕು. ಇಲ್ಲದಿದ್ದರೆ ಮುಂದಾಗುವ ಎಲ್ಲಾ ಅನಾಹುತಗಳಿಗೆ ಸರಕಾರವೇ ನೇರ ಹೊಣೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಂಚೋಳಿ ರೈತರು, ಕಬ್ಬು ಬೆಳೆಗಾರರು ಕಳೆದ ಹಲವಾರು ದಿನಗಳಿಂದ ನಿರಂತರ ಧರಣಿ ನಡೆಸುತ್ತಿದ್ದು, ಈಗ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲಾಧಿಕಾರಿಗಳು ಭೇಟಿ ನೀಡಿಲ್ಲ. ಸಂಕಷ್ಟದಲ್ಲಿರುವ ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಕಿಡಿಕಾರಿದರು.
ಪರಿಸರ ಮಾಲಿನ್ಯ ಕಾರಣ ನೀಡಿ, ಕಾರ್ಖಾನೆ ಬಂದ್ ಮಾಡಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಯ ಕಾರ್ಖಾನೆಗಳು ಪರಿಸರ ಮಾಲಿನ್ಯ ಕಾಪಾಡಿಕೊಂಡಿಲ್ಲದಿರುವ ಉದಾಹರಣೆಗಳಿವೆ. ಇವೆಲ್ಲವನ್ನೂ ಬಿಟ್ಟು ಸಿದ್ದಸಿರಿ ಕಾರ್ಖಾನೆ ಮಾತ್ರ ಸರಕಾರ ಕಣ್ಣಿಗೆ ಬಿದ್ದಿದೆ. ಈಗಾಗಲೇ, ಹೈಕೋರ್ಟ್ ಆದೇಶ ಹೊರಡಿಸಿ ಷರತ್ತಿಗೆ ಒಳಪಟ್ಟು ಕಾರ್ಖಾನೆ ಪ್ರಾರಂಭಿಸುವಂತೆ ರೈತರ ಹಿತದೃಷ್ಟಿಯಿಂದ ಹೈಕೋರ್ಟ್ ನಿರ್ದೇಶನ ನೀಡಿದ್ದರೂ ರಾಜ್ಯ ಸರಕಾರ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರು.
ರೈತರು ಕಬ್ಬು ಬೆಳೆಗಾರರಿಗೆ ಅನ್ಯಾಯವಾಗಬಾರದು ಎಂಬ ದೃಷ್ಟಿಯಿಂದ ಬಿಜೆಪಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಎರಡು-ಮೂರು ದಿನಗಳಲ್ಲಿ ರೈತರು, ಕಬ್ಬು ಬೆಳೆಗಾರರು ಬುದ್ಧಿಜೀವಿಗಳು ಮತ್ತು ರೈತಪರ ಸಂಘಟನೆಗಳು ಸಭೆ ನಡೆಸಿ ಸಮಗ್ರ ಚರ್ಚೆ ನಡೆಸಬೇಕು. ಈ ವೇಳೆ ಸರಕಾರ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಲಿದೆ. ಅನಾಹುತಗಳು ನಡೆಯುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದರು.
ಮೂರು ದಿನಗಳಲ್ಲಿ ಸ್ಪಂದನೆ ದೊರೆಯದಿದ್ದರೆ ಚಿಂಚೋಳಿ, ಚಿತ್ತಾಪುರ, ಸೇಡಂ ಸಂಪೂರ್ಣವಾಗಿ ಬಂದ್ ಘೋಷಣೆ ಮಾಡಲಾಗುವುದು. ಬೀದರ್ ಸಕ್ಕರೆ ಕಾರ್ಖಾನೆಗಳನ್ನು ಮುಚ್ಚಿಸಲು ಪ್ರತಿಭಟನೆ ಮಾಡಲಾಗುವುದು. ಕಲಬುರಗಿ ಜಿಲ್ಲೆಯಲ್ಲಿನ ಸಿಮೆಂಟ್ ಕಾರ್ಖಾನೆಗಳನ್ನು ಬಂದ್ ಮಾಡಿಸಿ ಬೃಹತ್ ಪ್ರತಿಭಟನೆ ಮಾಡಲಾಗುವುದು. ಸಿದ್ದಸಿರಿ ಕಾರ್ಖಾನೆ ಆರಂಭಿಸುವವರೆಗೂ ಈ ಧರಣಿ, ಪ್ರತಿಭಟನೆಗಳ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಚಂದ್ರಶೇಖರ ರೆಡ್ಡಿ ನಾಲ್ವಾರ್, ಸಂತೋಷ ಹಾದಿಮನಿ ಹಾಜರಿದ್ದರು.







