ಏಪ್ರಿಲ್ ಮೊದಲ ವಾರದಲ್ಲಿಯೇ ಹೊಸ ಯೋಜನೆಗಳ ಪ್ರಸ್ತಾವನೆ ಸಲ್ಲಿಸಿ : ಪ್ರಿಯಾಂಕ್ ಖರ್ಗೆ

ಕಲಬುರಗಿ : ಏಪ್ರಿಲ್ ಮೊದಲ ವಾರದಲ್ಲಿಯೇ ಇಲಾಖಾವಾರು ಹೊಸ ಪ್ರಸ್ತಾವನೆ ಸಲ್ಲಿಸುವಂತೆ ಚಿತ್ತಾಪೂರ ತಾಲೂಕುಮಟ್ಟದ ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ತಾಕೀತು ಮಾಡಿದ್ದಾರೆ.
ಚಿತ್ತಾಪೂರ ಪಟ್ಟಣದ ಶಾಸಕರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಜನರ ಆಶೀರ್ವಾದದೊಂದಿಗೆ ನಾನು ಶಾಸಕನಾಗಿ ಆಯ್ಕೆಯಾಗಿ ಸಚಿವನಾಗಿದ್ದೇನೆ, ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕು. ಆದರೆ ನನ್ನ ನಿರೀಕ್ಷೆಗೆ ತಕ್ಕಂತೆ ನೀವು ಕೆಲಸ ಮಾಡುತ್ತಿಲ್ಲ. ನಿಮಗೆ ಕೊಡುವ ಸಲಹೆ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ, ಇಲಾಖಾವಾರು ಹೊಸ ಪ್ರಸ್ತಾವನೆ ಕಳಿಸಿ, ಇದು ನನ್ನ ಕೊನೆಯ ಎಚ್ಚರಿಕೆ. ಏಪ್ರಿಲ್ ಮೊದಲ ವಾರದಲ್ಲಿ ಎಲ್ಲಾ ಇಲಾಖಾವಾರು ಹೊಸ ಪ್ರಸ್ತಾವನೆ ಕಳಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು.
ಸಮಾಜ ಘಾತುಕರನ್ನು ಹಾಗೂ ರೌಡಿ ಶೀಟರ್ ಗಳನ್ನು ನಿಯಂತ್ರಿಸುವಂತೆ ಗೃಹ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ನಿಮ್ಮ ಇಲಾಖೆಯ ಘನತೆ ಹಾಗೂ ಗೌರವವನ್ನು ಕಾಪಾಡುವಂತೆ ನೀವು ಕಾರ್ಯನಿರ್ವಹಿಸಬೇಕು. ನೀವು ಯಾರಿಗೂ ಅಂಜದೆ ಕೆಲಸ ಮಾಡಿ. ಕಾನೂನು ಪ್ರಕಾರ ನೀವು ಕೆಲಸ ಮಾಡುತ್ತಿದ್ದರೆ ನಿಮ್ಮೊಂದಿಗೆ ನಾನಿದ್ದೇನೆ, ಸರಕಾರವಿದೆ ಎಂದು ಅಭಯ ನೀಡಿದರು.
ಚಿತ್ತಾಪುರದ ಮಿನಿ ವಿಧಾನಸೌಧಕ್ಕೆ ಬೇಕಾಗಿರುವ ಪೀಠೋಪಕರಣಗಳ ಪಟ್ಟಿ ಮಾಡಿ ಸಲ್ಲಿಸುವಂತೆ ಸೇಡಂ ಸಹಾಯಕ ಆಯುಕ್ತರಿಗೆ ಸೂಚಿಸಿದ ಸಚಿವರು, ನೂತನ ವಿಧಾನಸೌಧಕ್ಕೆ ಏನು ಅಗತ್ಯವಿರುವ ಸಲಕರಣೆಗಳು ಹಾಗೂ ಸೌಲಭ್ಯಗಳನ್ನು ಒದಗಿಸಲು ಪಟ್ಟಿ ಸಲ್ಲಿಸಿದರೆ ಅದಕ್ಕೆ ಬೇಕಾಗುವ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು, ಆದಷ್ಟು ಬೇಗ ವಿಧಾನಸೌಧ ಸ್ಥಳಾಂತರ ಆಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶೀಘ್ರದಲ್ಲಿಯೇ ತಾಲೂಕು ಮಟ್ಟದ ಕೆಡಿಪಿ ಸಭೆ ನಡೆಸುವುದಾಗಿ ಹೇಳಿದ ಸಚಿವರು, ಅದಕ್ಕೆ ತಕ್ಕಂತೆ ತಯಾರಿ ನಡೆಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಪಂಚಾಯತ್ ಕಚೇರಿ ಹಾಗೂ ಶಾಸಕರ ಕಚೇರಿ ನಿರ್ಮಾಣಕ್ಕೆ ತಯಾರಿ ನಡೆಸಲಾಗುತ್ತಿದೆ. ಈಗಿನ ಕಚೇರಿಯನ್ನು ನೆಲಸಮಗೊಳಿಸಲಾಗುವುದು ಎಂದರು.
ಸಭೆಯಲ್ಲಿ ತಾಲೂಕು ಮಟ್ಟದ ಇಲಾಖೆಗಳ ಅಧಿಕಾರಿಗಳು ಇದ್ದರು.







