ಸುರಪುರ | ಸೆ.17ರಂದು ಕಲಬುರಗಿಯಲ್ಲಿ ಹಕ್ಕೊತ್ತಾಯ ಸಮಾವೇಶ
371(ಜೆ) ಸಮರ್ಪಕ ಜಾರಿ, 30 ಸಾವಿರ ಶಿಕ್ಷಕರ ನೇಮಕ ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯ

ಸುರಪುರ: ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರ ಬಿಡುಗಡೆ ಮಾಡುತ್ತಿರುವ ಅನುದಾನ ದುರ್ಬಳಕೆ ಆಗಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಅವಕಾಶ ನೀಡುವುದಿಲ್ಲ ಎಂದು ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಅಹೈಮದ್ ಪಠಾಣ್ ಎಚ್ಚರಿಕೆ ನೀಡಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 17ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಲಬುರಗಿಗೆ ಆಗಮಿಸುವ ಸಂದರ್ಭದಲ್ಲಿ ಸಮಿತಿಯ ವತಿಯಿಂದ ಹಕ್ಕೊತ್ತಾಯ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ಕಲಂ 371(ಜೆ) ಸಮರ್ಪಕ ಜಾರಿ, 30 ಸಾವಿರ ಶಿಕ್ಷಕರ ನೇಮಕಾತಿ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ, ಕೆಕೆಆರ್‌ಡಿಬಿ ಅನುದಾನ ಬಳಕೆಯ ನಿಯಮ ಸರಳೀಕರಣ, ಕಲ್ಯಾಣ ಕರ್ನಾಟಕ ಭಾಗದ 15 ಲಕ್ಷ ಎಕರೆ ಭೂಮಿಗೆ ಕೃಷ್ಣಾ ಕೊಳ್ಳದ 700 ಟಿಎಂಸಿ ನೀರಿನ ಬಳಕೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು ಎಂದರು.
ಕಲ್ಯಾಣ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕ, ಪ್ರಯೋಗಶಾಲೆ, ಗ್ರಂಥಾಲಯ ಮತ್ತು ವಸತಿ ನಿಲಯಗಳ ನಿರ್ಮಾಣ, ನಿರುದ್ಯೋಗಿ ಯುವಕರಿಗೆ ಕೌಶಲ್ಯಾಭಿವೃದ್ಧಿ ಯೋಜನೆಗಳು ಹಾಗೂ ಹೈನುಗಾರಿಕೆಗೆ ವಿಶೇಷ ಪ್ರೋತ್ಸಾಹ ನೀಡುವಂತೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಕಾರ್ಯಾಧ್ಯಕ್ಷೆ ವಕೀಲೆ ಜಯಲಲಿತಾ ಪಾಟೀಲ್ ಮಾತನಾಡಿ, ಕೆಕೆಆರ್‌ಡಿಬಿಗೆ ಬಿಡುಗಡೆಯಾಗಿರುವ ಅನುದಾನ ಸಂಪೂರ್ಣವಾಗಿ ಬಳಕೆಯಾಗಬೇಕು. ಕೈಗೊಂಡ ಕಾಮಗಾರಿಗಳು ಮತ್ತು ವೆಚ್ಚದ ವಿವರಗಳು ಸಾರ್ವಜನಿಕರಿಗೆ ಪಾರದರ್ಶಕವಾಗಿ ಲಭ್ಯವಾಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ತಾಲೂಕ ಅಧ್ಯಕ್ಷ ತಿಪ್ಪಣ್ಣ ಶುಕ್ಲಾ, ತಾಲೂಕ ಉಪಾಧ್ಯಕ್ಷ ಚೆನ್ನಮಲ್ಲಿಕಾರ್ಜುನ ಗುಂಡಾನೂರ, ಜಿಲ್ಲಾ ಖಜಾಂಚಿ ಶಿವರಾಜ ಕಲಕೇರಿ ಉಪಸ್ಥಿತರಿದ್ದರು.






