ಸುರಪುರ | ದಲಿತ ಕುಟುಂಬದ ಮೇಲಿನ ಹಲ್ಲೆ ಖಂಡಿಸಿ ಡಿಎಸ್ಎಸ್ ಪ್ರತಿಭಟನೆ; ಆರೋಪಿಗಳ ಬಂಧನಕ್ಕೆ ಒತ್ತಾಯ

ಸುರಪುರ : ತಾಲೂಕಿನ ಶಖಾಪುರ ಗ್ರಾಮದಲ್ಲಿ ದಲಿತ ಸಮುದಾಯದ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಪಟ್ಟಣದ ಪೊಲೀಸ್ ಠಾಣೆ ಎದುರು ಶನಿವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ಘಟನೆಯನ್ನು ಖಂಡಿಸಿದರು.
ಪ್ರತಿಭಟನೆಯ ವೇಳೆ ಮಾತನಾಡಿದ ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ, ಶಖಾಪುರ ಗ್ರಾಮದಲ್ಲಿ ದಲಿತ ಸಮುದಾಯದ ದೇವಪ್ಪ ತಳವಾರ ಅವರನ್ನು ಗ್ರಾಮದ ಮಹಿಳೆಯೊಬ್ಬರ ಅಂತ್ಯಕ್ರಿಯೆಗಾಗಿ ಶವ ಹೂಳಲು ಗುಂಡಿ ತೋಡಲು ಕರೆದಿದ್ದು, ಆರೋಗ್ಯದ ಸಮಸ್ಯೆಯಿಂದ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಕ್ಕೆ ದೇವಪ್ಪ ತಳವಾರ ಹಾಗೂ ಅವರ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು.
ಇದಲ್ಲದೆ, ಕುಟುಂಬದವರಿಗೆ ಕುಡಿಯುವ ನೀರು ತರಲು ಅವಕಾಶ ನೀಡದೇ, ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕವೂ, “ಪೊಲೀಸರಿಗೆ ದೂರು ನೀಡಿದ್ದೀರಾ, ನಿಮ್ಮನ್ನು ಜೀವಂತ ಬಿಡುವುದಿಲ್ಲ” ಎಂದು ಮತ್ತೆ ಬೆದರಿಕೆ ಹಾಕಲಾಗಿದೆ ಎಂದು ಅವರು ದೂರಿದರು.
ಗ್ರಾಮದಲ್ಲಿ ದಲಿತ ಸಮುದಾಯದವರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಘಟನೆಗೆ ಕಾರಣರಾದ ಆರೋಪಿಗಳನ್ನು ತಕ್ಷಣ ಬಂಧಿಸಿ ಗಡಿಪಾರು ಮಾಡಬೇಕು. ಅಲ್ಲದೆ, ಗ್ರಾಮದಲ್ಲಿರುವ ದಲಿತ ಕುಟುಂಬಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಬಳಿಕ ಪ್ರತಿಭಟನಾಕಾರರು ಡಿವೈಎಸ್ಪಿ ಜಾವೇದ್ ಇನಾಂದಾರ್ ಅವರಿಗೆ ಮನವಿ ಸಲ್ಲಿಸಿ, ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕ ಸಂಚಾಲಕ ಶರಣಪ್ಪ ತಳವಾರಗೇರ, ಕೆಂಚಪ್ಪ, ಹೊನ್ನಪ್ಪ ಕಟ್ಟಿಮನಿ, ವಿಸ್ವನಾಥ ಹೊಸಮನಿ,ಶಿರಿಯಪ್ಪ ತೇಲ್ಕರ್, ರಾಜು ಭಂಡಾರಿ, ಅಂಬ್ರೇಶ ದೊಡ್ಡಮನಿ, ಹಣಮಂತ ದೊಡ್ಡಮನಿ, ಸುರೇಶ ಚಿಕ್ಕನಹಳ್ಳಿ, ಬಸವರಾಜ ಮದ್ರಿಕಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.






