ಕಲಬುರಗಿ| ಹೆಸರು ಕಾಳು ಖರೀದಿ ಕೇಂದ್ರಗಳಿಗೆ ಭೇಟಿ ನೀಡಿದ ಸೈಯದ್ ಮೆಹಮೂದ

ಕಲಬುರಗಿ: 2025-26ನೇ ಸಾಲಿನ ಮುಂಗಾರು ಹಂಗಾಮಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಕಾಳು ಖರೀದಿಸಲು ಸರ್ಕಾರವು ಪ್ರತಿ ಕ್ವಿಂಟಾಲ್‌ಗೆ 8,768 ರೂ. ನಿಗದಿ ಮಾಡಿ ಆದೇಶಿಸಿದೆ. ಇದರ ಪ್ರಯುಕ್ತ ಕಲಬುರಗಿ ಜಿಲ್ಲೆಯಲ್ಲಿ 72 ಹೆಸರು ಕಾಳು ಖರೀದಿ ಕೇಂದ್ರಗಳನ್ನು ತೆರೆದು ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.
ಇದರ ಪ್ರಯುಕ್ತ ಕಲಬುರಗಿ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತದ ಅಧ್ಯಕ್ಷರಾದ ಸೈಯದ್ ಮೆಹಮೂದ ಚಿಸ್ತಿ ಅವರು ಹೆಸರು ಕಾಳು ಖರೀದಿ ಕೇಂದ್ರಗಳಾದ ಅಲ್ಲೂರ (ಬಿ), ಡೊಣಗಾಂವ ಹಾಗೂ ಸಿಂಧನಮಡು ಭೇಟಿ ನೀಡಿ ರೈತರು ಹಾಗೂ ಖರೀದಿ ಕೇಂದ್ರಗಳ ಮುಖ್ಯಸ್ಥರೊಂದಿಗೆ ಚರ್ಚಿಸಿದರು.
ನಂತರ ಮಂಡಳಿ ಅಧ್ಯಕ್ಷರು ಸೇಡಂ ಹಾಗೂ ಚಿತ್ತಾಪೂರ ತಾಲ್ಲೂಕಿನ ಕೇಂದ್ರ/ ರಾಜ್ಯ ಉಗ್ರಾಣಗಳಿಗೆ ಭೇಟಿ ನೀಡಿ ಹೆಸರು ಕಾಳು ಖರೀದಿ ಪ್ರಕ್ರಿಯೆ ಮತ್ತು ಗುಣಮಟ್ಟವನ್ನು ಸಹ ವೀಕ್ಷಣೆ ಮಾಡಿದರು.
ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 3,593 ರೈತರ ನೋಂದಣಿಯಾಗಿದ್ದು, 6,296.50 ಕ್ವಿಂಟಾಲ್ ರೈತರಿಂದ ಹೆಸರು ಕಾಳು ಖರೀದಿಸಲಾಗಿದೆ ಎಂದು ಕರ್ನಾಟಕ ರಾಜ್ಯದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿ. ಕಲಬುರಗಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





