ಅತಿವೃಷ್ಠಿ, ಪ್ರವಾಹ ಸಂಭವಿಸಿದರೆ ತುರ್ತು ಪರಿಹಾರಕ್ಕೆ ಕ್ರಮವಹಿಸಿ : ಪ್ರಿಯಾಂಕ್ ಖರ್ಗೆ

ಕಲಬುರಗಿ : ಅತಿವೃಷ್ಠಿ, ಪ್ರವಾಹ ಅಥವಾ ಇತರ ಆಕಸ್ಮಿಕ ಪರಿಸ್ಥಿತಿಗಳಲ್ಲಿ ಅಧಿಕಾರಿಗಳು ತುರ್ತು ಪರಿಹಾರ, ತಾತ್ಕಾಲಿಕ ವಸತಿ ಮತ್ತು ಆಹಾರ ಸರಬರಾಜು ತಕ್ಷಣ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಆಗಸ್ಟ್ 2025 ಮತ್ತು ಸೆಪ್ಟೆಂಬರ್ ಮೊದಲ 22 ದಿನಗಳಲ್ಲಿ ಜಿಲ್ಲೆಯಲ್ಲಿನ ಮಳೆಯ ಪ್ರಮಾಣ ಶೇ.69 ಹಾಗೂ ಶೇ.52 ಹೆಚ್ಚಾದ ಬಗ್ಗೆ ಗಮನ ಹರಿಸಿ, ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು, ಕಾಳಜಿ ಕೇಂದ್ರಗಳ ಪರಿಶೀಲನೆ ಮತ್ತು ಪ್ರವಾಹ ಮುನ್ನೆಚ್ಚರಿಕೆ ಜಾಗೃತಿ ತ್ವರಿತವಾಗಿ ಕೈಗೊಳ್ಳಬೇಕೆಂದು ಸೂಚಿಸಿದರು. ನದಿ, ಹಳ್ಳ, ಕೆರೆ ದಡಗಳಲ್ಲಿ ಈಜಾಡುವುದು, ಬಟ್ಟೆ ತೊಳೆಯುವುದು, ಮೀನುಗಾರಿಕೆ ಮತ್ತು ಸೇತುವೆಗಳಲ್ಲಿ ಸಂಚರಣೆ ಮುಂತಾದ ಅಪಾಯಕರ ಚಟುವಟಿಕೆಗಳನ್ನು ತಡೆಯಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸೂಚನೆ ನೀಡಿದರು.
ಬೆಳೆ ವಿಮೆ :
2025ರ ಮುಂಗಾರು ಹಂಗಾಮಿನಲ್ಲಿ 3.01 ಲಕ್ಷ ರೈತರು ನೊಂದಣಿ ಮಾಡಿಕೊಂಡಿದ್ದು, ತೀವ್ರ ಮಳೆಯ ಕಾರಣಕ್ಕೆ ಬೆಳೆ ಹಾನಿ ದೃಢಪಟ್ಟ ರೈತರ ಪೈಕಿ ಶೇ.59ರಷ್ಟು ರೈತರ ದೂರು ದಾಖಲಾಗಿದೆ. ಶೀಘ್ರದಲ್ಲೇ ಪರಿಹಾರ ವಿತರಣೆ ಪ್ರಾರಂಭವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಜಲಾಶಯಗಳ ನಿರ್ವಹಣೆ :
ಮಹಾರಾಷ್ಟ್ರದ ಉಜ್ಜನಿ ಮತ್ತು ಸಿನಾ ಜಲಾಶಯದಿಂದ 2.54 ಲಕ್ಷ ಕ್ಯುಸೆಕ್ ನೀರು ಭೀಮಾ ನದಿಗೆ ಹೊರಬಿದ್ದಿದ್ದು, ಸೊನ್ನ ಬ್ಯಾರೇಜ್‌ನಿಂದ 2.20 ಲಕ್ಷ ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರು ಹೆಚ್ಚಾಗುವ ಸಾಧ್ಯತೆಯ ಕಾರಣ, ನದಿ ಪಾತ್ರದ ಗ್ರಾಮಸ್ಥರು ಮುಂಜಾಗ್ರತೆ ವಹಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ತುರ್ತು ಸೇವೆಗಳು :
ಪ್ರವಾಹದಿಂದ ತೊಂದರೆಗೊಳಗಾಗಿರುವ ಕುಟುಂಬಗಳಿಗೆ ತಕ್ಷಣ ಪರಿಹಾರ, ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ, ಫಸ್ಟ್‌ಏಡ್, ORS ಸೌಲಭ್ಯಗಳನ್ನು ತದ್ವಾರು ಕಲ್ಪಿಸುವಂತೆ ಸೂಚಿಸಲಾಗಿದೆ. ಮನೆ ಕಳೆದುಕೊಂಡವರನ್ನು ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸಿ, ಅಪಾಯದಲ್ಲಿರುವ ಮನೆಗಳ ನಿವಾಸಿಗಳನ್ನು ಕಾಳಜಿ ಕೇಂದ್ರಗಳಲ್ಲಿ ಇರಿಸಬೇಕು.
ಬಿತ್ತನೆ ಬೀಜ ಮತ್ತು ರಸಗೊಬ್ಬರ: ಜಿಲ್ಲೆಯಲ್ಲಿ 21,682 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದ್ದು, ಹಿಂಗಾರು ಹಂಗಾಮಿಗಾಗಿ 21,375 ಕ್ವಿಂಟಲ್ ಬೀಜ ರೈತರಿಗೆ ವಿತರಿಸಲು ಸಿದ್ಧವಾಗಿದೆ. ಬೇಜವಾಬ್ದಾರಿ ಇಲ್ಲದೆ ಬೀಜದ ಕೊರತೆ ಇರುವುದಿಲ್ಲ ಎಂದು ಸಚಿವರು ಹೇಳಿದರು.
ಕುಡಿಯುವ ನೀರು :
ಕುಡಿಯುವ ನೀರು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಿ, ಕಲುಷಿತವಾದರೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕೆಂದು ನಿರ್ದೇಶನ ನೀಡಲಾಯಿತು.
ಸಭೆಯಲ್ಲಿ ಜಿಲ್ಲಾಧಿಕಾರಿ ಫೌಝಿಯಾ ತರನುಮ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಜಿಲ್ಲಾ ರಕ್ಷಣಾಧಿಕಾರಿ ಅಡ್ಡೂರು ಶ್ರೀನಿವಾಸುಲು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲ್ಲೂಕು ತಹಸೀಲ್ದಾರರು, ಇ.ಒಗಳು ಉಪಸ್ಥಿತರಿದ್ದರು.







