ಶಿಕ್ಷಕರೇ ಧರೆಯ ಮೇಲಿನ ದೇವರು: ಮುಡುಬಿ ಗುಂಡೇರಾವ

ಸೇಡಂ: ಶಿಕ್ಷಕರೇ ಧರೆಯ ಮೇಲಿನ ದೇವರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವವರೇ ನಿಜವಾದ ಗುರುಗಳು ಎಂದು ಸಂಶೋಧಕ, ಸಾಹಿತಿ ಮುಡುಬಿ ಗುಂಡೇರಾವ ಹೇಳಿದರು.
ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಮುಖ್ಯೋಪಾಧ್ಯಾಯಿನಿ ತಾರಾಬಾಯಿ ಅವರ ವಯೋನಿವೃತ್ತಿ ಅಂಗವಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾರಾಬಾಯಿ ಅವರು ಹಾಬಾಳ (ಟಿ), ಯರಗೋಳ ಸೇರಿದಂತೆ ಹಲವು ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ಹಾಗೂ ಮುಖ್ಯೋಪಾಧ್ಯಾಯಿನಿಯಾಗಿ ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿ, ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅವರ ನಿಷ್ಠೆ, ಪ್ರಾಮಾಣಿಕತೆ ಹಾಗೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದ ಅವರು ಆದರ್ಶ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದು, ಸಮಾಜ ಇಂದು ಅವರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕವಯತ್ರಿ ಜ್ಯೋತಿ ಎನ್. ಲಿಂಗಂಪಲ್ಲಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ತಾರಾಬಾಯಿ ಅವರು ಪ್ರಶಸ್ತಿಗಳ ಹಿಂದೆ ಹೋಗದೆ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಶಿಕ್ಷಣ ಇಲಾಖೆ ಹಾಗೂ ಸಮಾಜಕ್ಕೆ ಗೌರವ ತಂದಿದ್ದಾರೆ. ಶಾಲಾ ಮಕ್ಕಳೇ ತಮ್ಮ ನಿಜವಾದ ಆಸ್ತಿ ಎಂಬ ಭಾವನೆಯೊಂದಿಗೆ ಸೇವೆ ಸಲ್ಲಿಸಿರುವ ಅವರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಾದ ಸವಿತಾ ಕೋಡ್ಲಾ ಸೇರಿದಂತೆ ಹಲವರು ಮಾತನಾಡಿ, ತಾರಾಬಾಯಿ ಅವರ ಸೇವಾ ಮನೋಭಾವ, ಶಿಸ್ತು ಮತ್ತು ವಿದ್ಯಾರ್ಥಿಗಳ ಮೇಲಿನ ಪ್ರೀತಿಯನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಕುಬಾಯಿ ರಾಮದಾಸ ಪವಾರ, ಸವಿತಾ ಕೋಡ್ಲಾ, ಲಕ್ಷ್ಮೀ ಯಾದಗೀರ, ವೆಂಕಟೇಶ ಚವ್ಹಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜ್ಯೋತಿ ಲಿಂಗಂಪಲ್ಲಿ ಸಂಗೀತ ಗಾಯನ ನಡೆಸಿಕೊಟ್ಟರು. ವೆಂಕಟೇಶ ಸ್ವಾಗತಿಸಿದರು. ಶಿವಕುಮಾರ ಜುಲ್ಪಿ ಕಾರ್ಯಕ್ರಮ ನಿರೂಪಿಸಿದರು.
ವಯೋನಿವೃತ್ತಿ ಹೊಂದುತ್ತಿರುವ ತಾರಾಬಾಯಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು






