ಕಲಬುರಗಿ ಕೇಂದ್ರ ಕಾರಾಗೃಹದ ಅಕ್ರಮಗಳ ತನಿಖೆಗೆ ತಂಡ ರಚನೆ : ಜ.3ರಂದು ಡಿಜಿ ಅಲೋಕ್ ಕುಮಾರ್ ಜೈಲಿಗೆ ಭೇಟಿ

ಕಲಬುರಗಿ : ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಇತ್ತೀಚೆಗೆ ನಡೆದಿದೆ ಎನ್ನಲಾದ ಅಕ್ರಮ ಚಟುವಟಿಕೆಗಳ ಕುರಿತಾಗಿ ಸಮಗ್ರ ತನಿಖೆ ನಡೆಸಲು ತನಿಖಾ ತಂಡವನ್ನು ರಚಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಮಹಾನಿರ್ದೇಶಕ (ಡಿಜಿ) ಅಲೋಕ್ ಕುಮಾರ್ ಅವರು ಜ.3ರಂದು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಲಿದ್ದಾರೆ.
ಕಾರಾಗೃಹದಲ್ಲಿ ಜೂಜಾಟ, ಕೈದಿಗಳ ಹೈಫೈ ಜೀವನದ ವಿಡಿಯೋ ವೈರಲ್ ಆಗಿರುವುದು, ಪಿಎಸ್‌ಐ ಹಗರಣದ ಆರೋಪಿ ಆರ್.ಡಿ.ಪಾಟೀಲ್ ಹಾಗೂ ಕಾರಾಗೃಹದ ಅಧೀಕ್ಷಕಿ ಅನೀತಾ ವಿರುದ್ಧ ಲಂಚದ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಡಿಜಿ ಅಲೋಕ್ ಕುಮಾರ್ ಅವರು ಭೇಟಿ ನೀಡಲಿದ್ದಾರೆ.
ತನಿಖೆಗೆ ವಿಶೇಷ ತಂಡ :
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮ ಜೂಜಾಟ, ಮದ್ಯ ಸೇವನೆ, ಸಿಗರೇಟ್ ಬಳಕೆ ಸೇರಿದಂತೆ ಅನೈತಿಕ ಚಟುವಟಿಕೆಗಳ ಕುರಿತು ತನಿಖೆ ನಡೆಸಲು ಹಾಗೂ ಇದಕ್ಕೆ ಹೊಣೆಗಾರರಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕೂಲಂಕುಷ ವಿಚಾರಣೆ ನಡೆಸಲು ಕಾರಾಗೃಹಗಳ ಹೆಚ್ಚುವರಿ ಮಹಾನಿರೀಕ್ಷಕರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ.
ಕಾರಾಗೃಹಗಳ ಹೆಚ್ಚುವರಿ ಮಹಾನಿರೀಕ್ಷಕ ಪಿ.ವಿ.ಆನಂದರೆಡ್ಡಿ ಅವರ ನೇತೃತ್ವದಲ್ಲಿ ರಚಿಸಲಾದ ಈ ತನಿಖಾ ತಂಡವು ಜ.2ರಂದು ಜೈಲಿಗೆ ಭೇಟಿ ನೀಡಿ ಪರಿಶೀಲನೆ ಮತ್ತು ವಿಚಾರಣೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈರಲ್ ಆದ ವಿಡಿಯೋ ಮೂರು ತಿಂಗಳ ಹಿಂದಿನದ್ದು :
ಜೂಜಾಟದ ವೈರಲ್ ಆಗಿರುವ ವಿಡಿಯೋ ಸುಮಾರು 2ರಿಂದ 3 ತಿಂಗಳ ಹಿಂದಿನದ್ದು ಎನ್ನಲಾಗಿದೆ. ಅಲ್ಲದೇ, ಜೂಜಾಟದಲ್ಲಿ ಭಾಗಿಯಾಗಿರುವ ಕೈದಿ ಮುನಿಕೃಷ್ಣ ಅಲಿಯಾಸ್ ಕಪ್ಪೆ (ಬೆಂಗಳೂರು) ಈತನು ಕಳೆದ ಡಿ.2ರಂದು ಜೈಲಿನಿಂದ ಬಿಡುಗಡೆ ಹೊಂದಿರುವುದು ದೃಢಪಟ್ಟಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ, ವೈರಲ್ ಆದ ಜೂಜಾಟದ ವಿಡಿಯೋ ಇತ್ತೀಚಿನದ್ದಲ್ಲ ಎಂಬುದಾಗಿ ಪ್ರಾಥಮಿಕವಾಗಿ ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿದ್ದಾರೆ.







