ಕಲಬುರಗಿಯಲ್ಲಿ ಜವಳಿ ವಲಯದ ರಫ್ತು ಉತ್ತೇಜನ ಕಾರ್ಯಾಗಾರ
ಮೆಗಾ ಟೆಕ್ಸ್ ಟೈಲ್ ಪಾರ್ಕ್‌ನಿಂದ ಲಕ್ಷಾಂತರ ಉದ್ಯೋಗಸೃಷ್ಟಿ: ಶರಣಬಸಪ್ಪ ಪಪ್ಪಾ

ಕಲಬುರಗಿ: ಕೇಂದ್ರ ಸರ್ಕಾರದ ‘ಪಿಎಂ ಮಿತ್ರ’ ಯೋಜನೆಯಡಿ ದೇಶದಲ್ಲಿ ಸ್ಥಾಪಿಸಲಾಗುತ್ತಿರುವ ಏಳು ಮೆಗಾ ಟೆಕ್ಸ್ ಟೈಲ್ ಪಾರ್ಕ್‌ಗಳಲ್ಲಿ ಕಲಬುರಗಿಯೂ ಒಂದಾಗಿದ್ದು, ಜಿಲ್ಲೆಯ ಜವಳಿ ಕ್ಷೇತ್ರದ ಅಭಿವೃದ್ಧಿಗೆ ಇದೊಂದು ಮಹತ್ವದ ಅವಕಾಶವಾಗಿದೆ ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ಹೇಳಿದರು.
ಕೆಕೆಆರ್‌ಡಿಬಿಯಿಂದ 200 ಕೋಟಿ ರೂ. ಅನುದಾನ ನೀಡಲಾಗಿದ್ದು, ರಾಜ್ಯ ಸರ್ಕಾರ 1,000 ಎಕರೆ ಪ್ರದೇಶದಲ್ಲಿ ಮೆಗಾ ಟೆಕ್ಸ್ಟೈಲ್ ಪಾರ್ಕ್ ಅಭಿವೃದ್ಧಿಪಡಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಲಕ್ಷಾಂತರ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ ಎಂದರು.
ನಗರದ ಪಿಡಿಇ ಎಂಜಿನಿಯರಿಂಗ್ ಕಾಲೇಜು ಹಿಂಭಾಗದಲ್ಲಿರುವ ಕೆಜಿಟಿಟಿಐ ಸಭಾಂಗಣದಲ್ಲಿ ಗುರುವಾರ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಉತ್ತರ ವಲಯದ ಸಂಯುಕ್ತಾಶ್ರಯದಲ್ಲಿ ಜವಳಿ ವಲಯದ ಸಂಭಾವ್ಯ ರಫ್ತು ಉದ್ದಿಮೆದಾರರಿಗಾಗಿ ಆಯೋಜಿಸಿದ್ದ ಒಂದು ದಿನದ ‘ರಫ್ತು ಪ್ರೋತ್ಸಾಹನ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಜವಳಿ ಹಾಗೂ ಕೃಷಿ ಉತ್ಪನ್ನಗಳ ರಫ್ತಿನ ಕುರಿತು ಹೆಚ್ಚಿನ ಜಾಗೃತಿ ಮೂಡಬೇಕಿದೆ. ಕಲಬುರಗಿ ತೊಗರಿಬೇಳೆಗೆ ಜಿಐ ಟ್ಯಾಗ್ ದೊರೆತಿದ್ದರೂ, ಇಲ್ಲಿಂದ ನೇರವಾಗಿ ವಿದೇಶಗಳಿಗೆ ರಫ್ತು ನಡೆಯುತ್ತಿಲ್ಲ. ಬದಲಾಗಿ ಗುಜರಾತ್ ಮತ್ತು ಮಹಾರಾಷ್ಟ್ರದ ಉದ್ಯಮಿಗಳು ಇಲ್ಲಿಂದ ತೊಗರಿಬೇಳೆ ಖರೀದಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.
ಸ್ಥಳೀಯ ಉದ್ಯಮಿಗಳು ತೊಗರಿಬೇಳೆ ಸೇರಿದಂತೆ ಕೃಷಿ ಉತ್ಪನ್ನಗಳು ಹಾಗೂ ಜವಳಿ ಉತ್ಪನ್ನಗಳನ್ನು ನೇರವಾಗಿ ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲು ಮುಂದಾಗಬೇಕು. ಜವಳಿ ಇಲಾಖೆ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಕಲಬುರಗಿಯನ್ನು ಪ್ರಮುಖ ಕೈಗಾರಿಕಾ ಹಾಗೂ ಜವಳಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಂ ಮಾತನಾಡಿ, ಕಲಬುರಗಿ ಜಿಲ್ಲೆಯಿಂದ ಈಗಾಗಲೇ ಸಿಮೆಂಟ್, ಬೇಳೆ-ಧಾನ್ಯಗಳು ಹಾಗೂ ಬೆಂಟೋನೈಟ್ ಉತ್ಪನ್ನಗಳು ರಫ್ತಾಗುತ್ತಿವೆ. ಸ್ಥಳೀಯ ಉತ್ಪನ್ನಗಳು ನೇರವಾಗಿ ಜಾಗತಿಕ ಮಾರುಕಟ್ಟೆ ತಲುಪುವಂತೆ ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ ಮತ್ತು ನೆರವು ನೀಡಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿಗಳು ಇತ್ತೀಚೆಗೆ ವಿವಿಧ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೆಗಾ ಟೆಕ್ಸ್ಟೈಲ್ ಪಾರ್ಕ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ. ಜಿಲ್ಲೆಯ ಜವಳಿ ಉದ್ಯಮಿಗಳು ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಕೈಮಗ್ಗ ಮತ್ತು ಜವಳಿ ಇಲಾಖೆಯ ಉತ್ತರ ವಲಯದ ಜಂಟಿ ನಿರ್ದೇಶಕ ಬಿ. ವಿಠ್ಠಲರಾಜು ಮಾತನಾಡಿ, ರಫ್ತು ವ್ಯಾಪಾರ ದೊಡ್ಡ ಉದ್ಯಮಿಗಳು ಅಥವಾ ಕೋಟ್ಯಾಧಿಪತಿಗಳಿಗೆ ಮಾತ್ರ ಸೀಮಿತವಲ್ಲ. ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಸಹ ರಫ್ತು ಕ್ಷೇತ್ರಕ್ಕೆ ಸುಲಭವಾಗಿ ಪ್ರವೇಶಿಸಬಹುದು. ಉದ್ಯಮಿಗಳು ರಫ್ತಿಗೆ ಮುಂದಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅಗತ್ಯ ಸಹಕಾರ ದೊರೆಯಲಿದೆ ಎಂದರು.
ಕೆಜಿಟಿಟಿಐ ನಿರ್ದೇಶಕ ರಾಜೇಶ ಬಾವಗಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದ್ಯಮಗಳಿಗೆ ಆರಂಭಿಕ ಹಂತದಲ್ಲಿ ಮೂಲಧನ ಹಾಗೂ ತಾಂತ್ರಿಕ ಜ್ಞಾನದ ಕೊರತೆ ಎದುರಾಗುತ್ತದೆ. ಇಂತಹ ಉದ್ಯಮಿಗಳಿಗೆ ಕೆಜಿಟಿಟಿಐ ವತಿಯಿಂದ ವಿನ್ಯಾಸ ಮತ್ತು ಸಣ್ಣ ಬಿಡಿಭಾಗಗಳ ತಯಾರಿಕೆಯಲ್ಲಿ ಅಗತ್ಯ ತಾಂತ್ರಿಕ ನೆರವು ನೀಡಲಾಗುತ್ತಿದೆ. ಉದ್ಯಮಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬೆಂಗಳೂರಿನ ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ-ಡಿ. ಡಾ. ಕುಮಾರೇಶನ್ ಅವರು ರೇಷ್ಮೆ ಮತ್ತು ಜವಳಿ ಉತ್ಪನ್ನಗಳ ರಫ್ತು ಆರಂಭಿಸಲು ಬಯಸುವ ಉದ್ಯಮಿಗಳಿಗೆ ರಫ್ತು ಪ್ರಕ್ರಿಯೆಯ ವಿವಿಧ ಹಂತಗಳು, ಸರ್ಕಾರದ ಸೌಲಭ್ಯಗಳು ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ವಿಟಿಪಿಸಿ ಮ್ಯಾನೇಜರ್ ಜಾಫರ್ ಅನ್ಸಾರಿ, ಕೆಕೆಸಿಸಿಐ ಅನುಜಿತ್ ದಂಡೋತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜವಳಿ ಕ್ಷೇತ್ರದ ಉದ್ಯಮಿಗಳು ಹಾಗೂ ಸಂಭಾವ್ಯ ರಫ್ತುದಾರರು ಉಪಸ್ಥಿತರಿದ್ದರು. ಕಲಬುರಗಿ ಉತ್ತರ ವಲಯದ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಹೊಸಮನಿ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ನಿರೂಪಿಸಿದರು.






