400 ಕೋಟಿ ರೂ.ದರೋಡೆ ಪ್ರಕರಣದ ಕುರಿತು ಕೇಂದ್ರ ಸರಕಾರವೇ ತನಿಖೆ ಮಾಡಿಸಲಿ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಬೆಳಗಾವಿಯಲ್ಲಿ ಬೆಳಕಿಗೆ ಬಂದಿರುವ 400 ಕೋಟಿ ದರೋಡೆ ಪ್ರಕರಣಕ್ಕೆ ಸಂಬoಧಿಸಿದoತೆ ಕೇಂದ್ರ ಸರಕಾರವೇ ತನಿಖೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಆ ಹಣ ಯಾರದ್ದು? ಏನು ? ಎಲ್ಲಿಂದ ಬಂದಿದೆ? ಎಂಬುದೇ ಸ್ಪಷ್ಟವಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ ಈ ಪ್ರಕರಣಕ್ಕೆ ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಲಿಂಕ್ ಇದೆ ಎಂದು ತಿಳಿದು ಬಂದಿದೆ. ಈ ಮೂರು ರಾಜ್ಯಗಳಲ್ಲೂ ಅದೇ ಪಕ್ಷದ ಸರಕಾರಗಳಿವೆ. ಹಾಗಾದರೆ ಇವೆಲ್ಲವೂ ಆ ಸರಕಾರಗಳ ಮೂಗಿನ ನೆರಳಲ್ಲೇ ಹೇಗೆ ನಡೆಯುತ್ತಿದೆ ? ಹಣ ಯಾರದು ಎಂಬುದರ ಬಗ್ಗೆ ತನಿಖೆ ನಡೆಯಲಿ" ಎಂದು ಒತ್ತಾಯ ಮಾಡಿದರು.
"ಆ 400 ಕೋಟಿ ದರೋಡೆ ಹಣ ಕಾಂಗ್ರೆಸ್ ನದ್ದಾಗಿರಲಿ ಅಥವಾ ಬಿಜೆಪಿಯದ್ದಾಗಿರಲಿ ಮೊದಲು ಈ ಬಗ್ಗೆ ಸಮಗ್ರ ತನಿಖೆ ನಡೆದರೆ ಮಾತ್ರ ಸತ್ಯಾಂಶ ಹೊರಬರಲಿದೆ" ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
"ಡಿಮೋನಿಟೈಸೇಶನ್ ಅಂತ ದೊಡ್ಡ ಸ್ಲೋಗನ್ ಕೊಟ್ಟು, ಎಲ್ಲ ಕಪ್ಪು ಹಣ ವಾಪಸ್ ಬಂತು ಎಂದು ಪ್ರಧಾನಮಂತ್ರಿಯವರೇ ದೇಶದೆಲ್ಲೆಡೆ ಹೇಳಿಕೊಂಡು ಓಡಾಡಿದ್ದರು. ಹಾಗಿದ್ದರೆ ಈಗ ಈ 400 ಕೋಟಿ ಎಲ್ಲಿಂದ ಬಂತು ? ಎಂದು ಪ್ರಶ್ನಿಸಿದರು.
ಕರ್ನಾಟಕದ ಕೆಲ ಬಿಜೆಪಿ ಮುಖಂಡರು ಈ ಹಣವನ್ನು ತಿರುಪತಿಗೆ ಕಪ್ಪು ಹಣವನ್ನು ಬಿಳಿ ಹಣ ಮಾಡಲು ಅಥವಾ ಚುನಾವಣೆಗೆ ಬಳಸಲು ಕೊಂಡೊಯ್ಯಲಾಗುತ್ತಿದೆ ಎಂದು ಹೇಳಿರುವುದನ್ನು ಉಲ್ಲೇಖಿಸಿದ ಪ್ರಿಯಾಂಕ್ ಖರ್ಗೆ, ಹಾಗಾದರೆ ಅವರಿಗೆ ಈ ಮಾಹಿತಿ ಹೇಗೆ ಗೊತ್ತು ? ಸರಕಾರಕ್ಕೆ, ಪೊಲೀಸರಿಗೆ ಇಲ್ಲದ ಮಾಹಿತಿ ಬಿಜೆಪಿ ಶಾಸಕರಿಗೆ ಹೇಗೆ ಗೊತ್ತಾಗುತ್ತದೆ? ಅವರನ್ನು ಮೊದಲು ತನಿಖೆಗೆ ಒಳಪಡಿಸಬೇಕು ಎಂದು ಹೇಳಿದರು.
ಪ್ರಧಾನಮಂತ್ರಿ ಅವರು 'ಮನ್ ಕಿ ಬಾತ್'ನಲ್ಲಿ ಭಜನ್ ಕ್ಲಬ್ ಬಗ್ಗೆ ಮಾತನಾಡುತ್ತಾರೆ. ಆದರೆ 400 ಕೋಟಿ ಹಣ ಟ್ರಕ್‌ಗಳಲ್ಲಿ ಸಾಗುತ್ತಿದೆ ಎಂಬುದು ಅವರಿಗೆ ಗೊತ್ತಿಲ್ಲವೇ? ಅಮಿತ್ ಶಾ ಅವರು ಎಲ್ಲಿದ್ದಾರೆ ? ನಿದ್ದೆ ಮಾಡುತ್ತಿದ್ದಾರಾ? ಚುನಾವಣೆ ಬಂದಾಗ ಮಾತ್ರ ಇವರೆಲ್ಲ ಕಾಣಿಸಿಕೊಳ್ಳುತ್ತಾರೆ. ಇಂತಹ ಪ್ರಶ್ನೆಗಳು ಬಂದಾಗ ಕೇವಲ ಕಾಂಗ್ರೆಸ್ ಮಾತ್ರ ಉತ್ತರಿಸಬೇಕೇ? ಬಿಜೆಪಿ ಕೂಡ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಪ್ರಧಾನಮಂತ್ರಿಗೆ ಕಲಬುರಗಿ ರೊಟ್ಟಿ ಬಗ್ಗೆ ಗೊತ್ತಿರುತ್ತದೆ. ಹಾಗಾದರೆ ಈ 400 ಕೋಟಿ ಹಣ ಎಲ್ಲಿಂದ ಹೋಗುತ್ತಿದೆ ಎಂಬುದೂ ಗೊತ್ತಿರಬೇಕಲ್ವಾ? ಎಂದು ಟೀಕಿಸಿದರು.
2028ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಸ್ಪರ್ಧೆ ನಡೆಸಲಿದೆ ಮತ್ತು ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಎರಡೂ ಪಕ್ಷಗಳಿಗೆ ತಮ್ಮ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸುವ ಶಕ್ತಿ ಇಲ್ಲ. ಅದಕ್ಕಾಗಿ ಒಂದಾಗಬೇಕಾದ ಸ್ಥಿತಿ ಬಂದಿದೆ. ಬಿಜೆಪಿಯವರು ಮೊದಲು ಕುಮಾರಸ್ವಾಮಿ ಅವರನ್ನು ತಮ್ಮ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ನೋಡೋಣ. ಇವೆಲ್ಲವೂ ಈಗ ಊಹಾಪೋಹಗಳಷ್ಟೇ ಎಂದು ಹೇಳಿದರು.







